ಬೆಂಗಳೂರು: ರಾಜ್ಯದಲ್ಲಿ ಈಗ ಕಡುಬೇಸಿಗೆ, ಸೆಕೆಯಿಂದ ಜನ ಹೈರಾಣಾಗಿದ್ದಾರೆ. ಆದರೆ ಮಾರ್ಚ್ ತಿಂಗಳಿನಿಂದ, ಮೇ ತಿಂಗಳವರೆಗೆ ರಾಜ್ಯದ ಹವಾಮಾನ ಹೇಗಿರಲಿದೆ, ಎಲ್ಲೆಲ್ಲಿ ಮಳೆಯ ಸಂಭವವಿದೆ ಇಲ್ಲಿದೆ ಸಂಪೂರ್ಣ ವಿವರ.
ಫೆಬ್ರವರಿಯಿಂದಲೇ ಕಡು ಬೇಸಿಗೆಯ ವಾತಾವರಣ ಶುರುವಾಗಿದ್ದು, ಸೆಕೆಗೆ ಜನ ಬಳಲಿ ಬೆಂಡಾಗಿದ್ದಾರೆ. ಈಗಂತೂ ಹಗಲು ಹೊರಗಡೆ ಕಾಲಿಡಲೂ ಆಗದಷ್ಟು ಬಿಸಿಲಿನ ತಾಪಮಾನವಿದೆ. ಹೀಗಾಗಿ ಮಳೆ ಯಾವಾಗ ಬರುತ್ತದೋ ಎಂದು ಜನ ಕಾಯುವಂತಾಗಿದೆ.
ಹವಾಮಾನ ವರದಿಗಳ ಪ್ರಕಾರ ಮಾರ್ಚ್ ನಿಂದ ಮೇ ತಿಂಗಳ ನಡುವಿನ ಅವಧಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಜೋರಾಗಿಯೇ ಸದ್ದು ಮಾಡಲಿದೆ. ಇದರಿಂದಾಗಿ ಈ ಭಾಗದಲ್ಲಿ ಹಗಲು ಬಿಸಿ ವಾತಾವರಣವಿದ್ದರೂ ರಾತ್ರಿ ತಂಪಾದ ವಾತಾವರಣವಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಆದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ ತಾಪಮಾನ ವಿಪರೀತ ಏರಿಕೆಯಾಗಲಿದ್ದು, ಈ ಮೂರು ತಿಂಗಳ ಅವಧಿಯಲ್ಲಿ ಉಷ್ಣ ಅಲೆಯ ಅಪಾಯವಿದೆ. ಈ ಅವಧಿಯಲ್ಲಿ ಫೆಬ್ರವರಿಗಿಂತಲೂ ಅಧಿಕ ತಾಪಮಾನ ಕಂಡುಬರಲಿದೆ. ತಾಪಮಾನ 43 ರಿಂದ 45 ಡಿಗ್ರಿಗೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಈ ಮೂರು ತಿಂಗಳ ಅವಧಿಯಲ್ಲಿ ಜನರು ಆದಷ್ಟು ಹೊರಗೆ ಓಡಾಡದೇ ಎಚ್ಚರಿಕೆ ವಹಿಸುವುದು ಸೂಕ್ತ.