Daily Horoscope

Select Your Language

Notifications

webdunia
webdunia
webdunia
webdunia

ಕೊಲೆ, ಸುಲಿಗೆ ಆದ್ರೂ ಗೃಹಸಚಿವರು ಮಾತಾಡಲ್ಲ, ಅವರಿಗೆ ಆರ್ ಎಸ್ಎಸ್ ನದ್ದೇ ಚಿಂತೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy
ಲಿಂಗಸಗೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊಲೆ ಮತ್ತು ಅತ್ಯಾಚಾರ ನಡೆದರೂ ಗಮನ ನೀಡದ ಅಸಮರ್ಥ ಗೃಹ ಸಚಿವರು ಬೇಕಾಗಿಲ್ಲ. ಈಗಿನ ಗೃಹ ಸಚಿವರಿಗೆ ಆರ್‍ಎಸ್‍ಎಸ್ ಉಸ್ತುವಾರಿ ನೀಡಿ ಬೇರೆಯವರನ್ನು ಗೃಹ ಸಚಿವರಾಗಿ ಮುಖ್ಯಮಂತ್ರಿಗಳು ನೇಮಿಸಲಿ ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.  
 
ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗವಾಗಿರುವ ರಾಯಚೂರು ಜಿಲ್ಲೆಯಲ್ಲಿ ಕಳೆದ ಹದಿನೈದು ದಿನದಲ್ಲಿ ಮೂರು ಅಹಿತಕರ ಘಟನೆ ನಡೆದಿವೆ. ಅದರಲ್ಲಿ ಒಂದು ದಲಿತ ನಾಯಕನ ಹತ್ಯೆ ಮತ್ತು ಎರಡು ಅತ್ಯಾಚಾರ ಮತ್ತು ಕೊಲೆ ಪ್ರಕರಣ ಘಟಿಸಿವೆ. ಆದರೆ ಈ ಬಗ್ಗೆ ಸರ್ಕಾರವಾಗಲಿ ಗೃಹ ಸಚಿವರಾಗಲಿ ಗಮನವೇ ನೀಡಿಲ್ಲ ಎಂದು ಆರೋಪಿಸಿದರು. 
ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಅನ್ಯಾಯವಾದಾಗ ರಕ್ಷಣೆಗೆ ಬರಬೇಕಾದ ಕಾಂಗ್ರೆಸ್ ಸರ್ಕಾರ ಬಂದಿಲ್ಲ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿ ಬರುತ್ತದೆ ಎಂದು ಹೇಳಿದರು. 
 
ಇಂತಹ ಘಟನೆಗಳು ಕಲ್ಯಾಣ ಕರ್ನಾಟಕಕ್ಕೆ ಕಪ್ಪು ಚುಕ್ಕೆ. ಈ ಭಾಗದವರೇ ಆಗಿರುವ ಗೃಹ ಸಚಿವರು ಇಲ್ಲಿಗೆ ಬಂದು ಏನಾಗಿದೆ ಎಂದು ನೋಡಲಿಲ್ಲ. ಮೂರು ಹತ್ಯೆಗಳಾದರೂ ಮೂಸಿ ನೋಡಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಇಲಾಖೆಯನ್ನು ನಿಭಾಯಿಸುವ ಶಕ್ತಿ ಇಲ್ಲ. ಗೃಹ ಇಲಾಖೆಯನ್ನು ನಿಭಾಯಿಸಲು ಎಲ್ಲಾ ರೀತಿಯಿಂದ ಅವರು ವಿಫಲವಾಗಿದ್ದಾರೆ ಎಂದು ಆಕ್ಷೇಪಿಸಿದರು. ಪ್ರಕರಣ ನಡೆದ ನಂತರ ಅಧಿಕಾರಿಗಳು ಬಂದಿದ್ದಾರೆ. ಪೊಲೀಸರು ಬಂದಿದ್ದಾರೆ. ದೂರು ದಾಖಲಾಗಿದೆ. ಬಂಧನವಾಗಿದೆ. ಆದರೆ ಮಂತ್ರಿಗಳು, ಕಾಂಗ್ರೆಸ್ ಮುಖಂಡರು ಬಂದು ಪರಿಶೀಲನೆ ಮಾಡಿಲ್ಲ. ಇದು ಎಷ್ಟು ಸರಿ ಎಂದರು. 
 ರಾಜ್ಯಕ್ಕೆ ಒಳ್ಳೆ ಒಬ್ಬ ಗೃಹ ಸಚಿವ ಬೇಕು. ಈಗಿರುವ ಗೃಹ ಸಚಿವರನ್ನು ಆರ್‍ಎಸ್‍ಎಸ್ ಉಸ್ತುವಾರಿ ನೀಡಲಿ. ಒಂದು ಹೊಸ ಮಂತ್ರಿ ಸೃಷ್ಟಿಸಿ. ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಆರ್‍ಎಸ್‍ಎಸ್ ಎಂದು ಪಠಿಸುತ್ತಾರೆ. ಜನರ ರಕ್ಷಣೆಯನ್ನು ಸಚಿವರು ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಲಿ ಎಂದು ಆಗ್ರಹಿಸಿದರು. 
 
ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಗಾಂಜಾ, ಡ್ರಗ್ಸ್ ಹಾವಳಿ ಹೆಚ್ಚಿದೆ. ಇದನ್ನು ಮಟ್ಟ ಹಾಕಬೇಕು. ಅದನ್ನು ತಡೆಯುವ ಸಮರ್ಥ ಸಚಿವರು ಬೇಕು. ಅದು ಬಿಟ್ಟು ಟೂರಿಂಗ್ ಟಾಕೀಸ್ ತರಹ ಕಲಬುರಗಿಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಕಲಬುರಗಿಗೆ ಓಡಾಡುವ ಸಚಿವರು ಬೇಕಿಲ್ಲ. ಅಂತಹವರಿಂದ ಸಮಸ್ಯೆಗಳು ಪರಿಹಾರ ಆಗಲ್ಲ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕ ಕೊಲೆ ಮತ್ತು ಅತ್ಯಾಚಾರ ವಿಷಯವನ್ನು ಸದನ ನಡೆಯುವಾಗಲೇ ಪ್ರಸ್ತಾಪ ಮಾಡಿದ್ದೇವೆ. ಆದರೆ ಹೆಚ್ಚು ಪ್ರಚಾರ ಸಿಗಲಿಲ್ಲ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದ ಹೊರಗೆ ಮತ್ತು ಒಳಗೆ ಬಿಜೆಪಿ  ಹೋರಾಟ ನಡೆಸುತ್ತಿತ್ತು ಎಂದು ಹೇಳಿದರು. 
 
ಸದನ ಇನ್ನೂ ಮೂರು ದಿನ ನಡೆಯಬೇಕಾಗಿತ್ತು. ಆದರೆ ಬಾಂಗ್ಲಾದೇಶದ ನುಸುಳುಕೋರರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಇಬ್ಬರೂ ಸೇರಿ ಓಡಿಸಿದ ಹಾಗೇ ಈ ಕಾಂಗ್ರೆಸ್ ಮತ್ತು ಮಂತ್ರಿ ಮಂಡಲ ಸದನವನ್ನು ಮುಂದೂಡಿ ಓಡಿ ಹೋದರು ಎಂದು ವ್ಯಂಗವಾಡಿದರು. ಅತ್ಯಾಚಾರ ಮತ್ತು ಕೊಲೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಸರಿಯಾದ ಪ್ರಾಮುಖ್ಯತೆ ಸಿಗದೇ ಇದ್ದ ಕಾರಣ ಇಲ್ಲಿಗೆ ಬಂದಿದ್ದೇವೆ. ಇದು ನಮ್ಮ ಬದ್ಧತೆ. ಸ್ಥಳಕ್ಕೆ ಬಂದರೆ ಮಾತ್ರವೇ ಸತ್ಯ ತಿಳಿಯುತ್ತದೆ. ಏಕೆಂದರೆ ಸರಕಾರದ ವರದಿಯೇ ಬೇರೆ ಇರುತ್ತೆ. ಅಧಿಕಾರಿಗಳ ವರದಿಯೇ ಬೇರೆ ಇರುತ್ತೆ. ದೇವದುರ್ಗದಲ್ಲೂ ಯುವಕನ ಕೊಲೆ ಆಗಿದೆ. ಹೆಣ್ಣು ಮಗುವಿನ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಎಲ್ಲಕ್ಕೂ ಕಾರಣ ಏನು ಎಂದು ತಿಳಿಯಲಾಗುವುದು ಎಂದರು. 
 
ಇಲ್ಲಿನ ಎಲ್ಲಾ ಅನಾಹುತಗಳಿಗೆ ಡ್ರಗ್ಸ್ ಬಳಕೆಯೇ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಡ್ರಗ್ಸ್  ಮಾರಾಟದ ಹಿಂದೆ ಯಾರಿದ್ದಾರೆ ಅವರನ್ನು ಸದೆ ಬಡಿಯಬೇಕಾಗಿದೆ. ಸಣ್ಣ ವಯಸ್ಸಿನವರು ಗಾಂಜಾ ಸೇವಿಸಿ ಬೀದಿ ಸುತ್ತುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿದೆ ಎಂದರು. 
  
ಜಿಲ್ಲಾಧಿಕಾರಿಗಳು ಒಂದು ವರದಿ ನೀಡಿದ್ದಾರೆ. ಕೆಲವು ದಲಿತ ಸಂಘಟನೆಗಳು ಬಂದು ಮೂರು ಕಡೆ ಕೊಲೆ ಆಗಿದೆ. ಅತ್ಯಾಚಾರ ಆಗಿದೆ ಸಿಒಡಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಪೋಸ್ಟ್ ಮ್ಯಾನ್ ಕೆಲಸ ಮಾಡಲು ಜಿಲ್ಲಾಧಿಕಾರಿಗಳು ಬೇಕಾಗಿಲ್ಲ. ಡಿಸಿ ಸ್ಥಳಕ್ಕೆ ಹೋಗಿ ಸ್ಥಳ ಮಹಜರು ಮಾಡಿ ಪೊಲೀಸರಿಂದ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡಿ ಕ್ರಮದ ಬಗ್ಗೆ ತಿಳಿಸಬೇಕು ಎಂದು ಹೇಳಿದರು. 
 
ಅಧಿಕಾರಿಗಳ ಇಂತಹ ಕ್ರಮವನ್ನು ಖಂಡಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ. ದಲಿತರಿಗೆ ಇಷ್ಟು ಅನ್ಯಾಯ ಆದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ಅಧಿಕಾರಿಗಳು ಕೆಲಸ ಮಾಡಲಿಲ್ಲ ಎಂದಾದರೆ ಏಕೆ ಬೇಕು?. ನೊಂದವರ ಮನೆಗಳಿಗೆ ಹೋಗಿ ಸಾಂತ್ವನ ಹೇಳುವ ಯೋಗ್ಯತೆ ಇಲ್ಲದ ಇವರಿಂದ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಏನೇ ಆದರೂ ಸತ್ಯ ಹೊರಬರಬೇಕು. ನೊಂದವರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.  
 

Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗನ ಜತೆ ಸಿಎಂ ಡಿಕೆ ಶಿವಕುಮಾರ್ ವಿಡಿಯೋ ಕಾಲ್‌ನಲ್ಲಿ ಮಾತುಕತೆ