ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬಿಜೆಪಿ ಶಾಸಕರಿಗೆ ಎಷ್ಟು ಅನುದಾನ ನೀಡಿದೆ? ಕಾಂಗ್ರೆಸ್ ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸವಾಲು ಹಾಕಿದರು.
ಮಾನ್ಯ ರಾಜ್ಯಪಾಲರ ಭೇಟಿಯ ಬಳಿಕ ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಕಡಿಮೆ ಅನುದಾನ ಕುರಿತಂತೆ ಮಾತನಾಡುವ ಕಾಂಗ್ರೆಸ್ ಮುಖಂಡರು ತಮ್ಮ ಮನೆಯಲ್ಲಿ ಸತ್ತುಬಿದ್ದ ಹೆಗ್ಗಣವನ್ನು ಮೊದಲು ಆಚೆ ಬಿಸಾಡಲಿ; ಆಮೇಲೆ ಬೇರೆಯವರ ತಟ್ಟೆಯಲ್ಲಿ ಬಿದ್ದ ನೊಣವನ್ನು ಎತ್ತಿ ಆಚೆ ಹಾಕಬಹುದು ಎಂದು ತಿಳಿಸಿದರು. ತಾರತಮ್ಯ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿ; ಆಗ ನಾವು ನಿಯೋಗದಲ್ಲಿ ನಿಮ್ಮ ಜೊತೆ ಬರಲು ಸಿದ್ಧ ಎಂದು ತಿಳಿಸಿದರು.
ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ, ಕಲ್ಲೆಸೆದ ದೇಶದ್ರೋಹಿಗಳನ್ನು ಬೆಂಬಲಿಸುವ ಹಾಗೂ ಅವರ ಮೊಕದ್ದಮೆ ರದ್ದುಪಡಿಸುವ ಸರಕಾರದ ನಿರ್ಧಾರದ ವಿರುದ್ಧ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂದು ಅವರು ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರ ಜೊತೆ ಚರ್ಚೆ ಮಾಡಿದ್ದು, ಹುಬ್ಬಳ್ಳಿಯಲ್ಲಿ ಶೀಘ್ರವೇ ದೊಡ್ಡ ಹೋರಾಟ ಮಾಡಲಿದ್ದೇವೆ ಎಂದರು. ಕೇಸು ರದ್ದತಿ ಸರಿಯಲ್ಲ ಎಂಬ ಕುರಿತು ಸರಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.
ಸರಕಾರದ ಯೂ ಟರ್ನ್: ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಈ ಸರಕಾರ ವಜಾ ಮಾಡಬೇಕು ಎಂದು ಗೌರವಾನ್ವಿತ ರಾಜ್ಯಪಾಲರನ್ನು ಒತ್ತಾಯಿಸಿದ್ದಾಗಿ ವಿವರಿಸಿದರು.
ದೇಶದ್ರೋಹಿಗಳ ವಿರುದ್ಧ ನಮ್ಮ ಸರಕಾರ ಕೇಸುಗಳನ್ನು ಹಾಕಿತ್ತು. ಆದರೆ, ಕೋರ್ಟಿನಲ್ಲಿ ಕೇಸು, ಎನ್‍ಐಎ ತನಿಖೆ ನಡೆಯುತ್ತಿರುವಾಗ ಪ್ರಕರಣ ರದ್ದತಿ ಕುರಿತು ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಿದ್ದಾರೆ. ಪ್ರತಿಭಟನೆಗಳು ಹೆಚ್ಚಾದ ಬಳಿಕ ನಿನ್ನೆ ಕೋರ್ಟ್ ಒಪ್ಪಿದರೆ ಮಾತ್ರ ಕೇಸು ಹಿಂಪಡೆಯುವುದಾಗಿ ಯೂ ಟರ್ನ್ ಹೊಡೆದಿದ್ದಾರೆ ಎಂದು ಟೀಕಿಸಿದರು. ಮೊದಲು ಕೋರ್ಟಿಗೆ ಅರ್ಜಿ ಹಾಕಬೇಕಿತ್ತು ಎಂದ ಅವರು, ಓಲೈಕೆ ಮಾಡಲು ಕೇಸು ವಾಪಸ್ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂದು ಟೀಕಿಸಿದರು.
ಎಲ್ಲ ಸ್ತರದಲ್ಲೂ ಹೋರಾಟ- ಸಿ.ಟಿ.ರವಿ
ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ಕೋರ್ಟಿನಲ್ಲಿ ಮಾತ್ರವಲ್ಲದೆ, ಜನತಾ ನ್ಯಾಯಾಲಯದಲ್ಲೂ ಬಿಜೆಪಿ ಹೋರಾಟ ಮಾಡಲಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದರು. ಕೇಸ್ ವಾಪಸ್ ಪಡೆಯುವಾಗ ನೀವು ಕೋಮುವಾದಿ ಎಂದು ತೋರಿಸಿದ್ದೀರಿ ಎಂದು ಟೀಕಿಸಿದರು.
ಹಿಜಾಬ್ ವಿರುದ್ಧ ಹೋರಾಟ ಮಾಡಿದವರ ಕೇಸ್ ವಾಪಸ್ ಪಡೆದಿಲ್ಲ; ಆದರೆ, ಹಿಜಾಬ್ ಪರವಾಗಿ ಹೋರಾಟ ಮಾಡಿದವರ ಕೇಸ್ ವಾಪಸ್ ಪಡೆಯುತ್ತಾರೆ. ವಿದ್ಯಾರ್ಥಿಗಳಲ್ಲೂ ಭೇದಭಾವ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಲ್ಲಿ ಟೋಪಿ ಹಾಕುವವ ಯಾರು, ಕುಂಕುಮ ಇಡುವವರು ಯಾರೆಂದು ಭೇದಭಾವ ಮಾಡಿದ್ದೀರಿ ಎಂದು ಖಂಡಿಸಿದರು.