ಬೆಂಗಳೂರು: ಕರ್ನಾಟಕದಲ್ಲಿ ವಕ್ಫ್ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಸುಮಾರು 6 ಲಕ್ಷ ಎಕರೆ ಆಸ್ತಿಯನ್ನು ವಕ್ಫ್ ಬೋರ್ಡ್ ಗೆ ಮಾಡಲು ಹೊರಟಿದ್ದಾರೆ ಎಂದಿದ್ದಾರೆ.
ವಕ್ಫ್ ಎಂಬುದೇ ದೊಡ್ಡ ಮೋಸ. ಮೊದಲು ವಕ್ಫ್ ಮಂಡಳಿ ರದ್ದಾಗಬೇಕು. ಇದು ರಾಜ್ಯಕ್ಕೆ ಅಂಟಿದ ಶಾಪ. ಹೀಗಾಗಿ ಇದನ್ನು ನ್ಯಾಯಯುತವಾಗಿ ಬಗೆಹರಿಸಬೇಕು. ಖಬರಸ್ತಾನ ಹೆಸರಿನಲ್ಲಿ ಕಂದಾಯ ಇಲಾಖೆಯ 2,700 ಎಕರೆ ಕೊಡಲು ಹೊರಟಿದ್ದಾರೆ. ವಕ್ಫ್ ಗೆ ಎಷ್ಟು ಜಾಗ ಕೊಡಬೇಕು ಎಂದು ಅವರು ತೀರ್ಮಾನ ಮಾಡಿದ್ದಾರೆ. ಸುಮಾರು 6 ಲಕ್ಷ ಎಕರೆ ಆಸ್ತಿ ವಕ್ಫ್ ಗೆ ಮಾಡಲು ಹೊರಟಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುಗೆ ಧಮ್ಕಿ ಹಾಕಿ ವಕ್ಫ್ ತಿದ್ದುಪಡಿ ಬಾರದಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ಜೆಪಿಸಿ ಕಮಿಟಿ ಮುಂದೆ ಎಲ್ಲಾ ದಾಖಲೆ ನೀಡಿದ್ದೇವೆ. ಜಮೀರ್ ಬಂದು ಅಧಿಕಾರಿಗಳಿಗೆ ಬೆದರಿಸಿ ನೋಟಿಸ್ ಕೊಡಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ನಿರ್ಧಾರ ಮಾಡುವವರೆಗೂ ಯಾವುದೇ ನೋಟಿಸ್ ಕೊಡಬೇಡಿ ಎಂದು ನಾವು ಸೂಚಿಸಿದ್ದೇವೆ. ಈ ಬಗ್ಗೆ ಜನ ಜಾಗೃತಿ ಮೂಡಿಸಲಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ.
ಬಿಜೆಪಿ ಪಕ್ಷದಿಂದಲೇ ಈ ಬಗ್ಗೆ ಜಾಗೃತಿ ಹೋರಾಟ ನಡೆಯಲಿದೆ. ಕೆಲವು ಕಡೆ ನೋಟಿಸ್ ಕೂಡಾ ನೀಡದೇ ವಕ್ಫ್ ಎಂದು ನಮೂದು ಮಾಡಲಾಗಿದೆ. ಕೆಲವು ಕಡೆ ನೋಟಿಸ್ ಕೊಟ್ಟು ವಾಪಸ್ ಮಾಡಿದ್ದಾರೆ. ವಕ್ಫ್ ಮಂಡಳಿಯೇ ರದ್ದಾಗಬೇಕು ಎಂಬುದು ನಮ್ಮ ಬೇಡಿಕೆ ಎಂದು ಯತ್ನಾಳ್ ಹೇಳಿದ್ದಾರೆ.