Publish Date: Fri, 30 May 2025 (08:40 IST)
Updated Date: Fri, 30 May 2025 (08:43 IST)
ಬೆಂಗಳೂರು: ಕನ್ನಡದ ಅಮೂಲ್ಯ ರತ್ನವೊಂದನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಖ್ಯಾತ ಗೀತ ಸಾಹಿತಿ ಎಚ್ಎಸ್ ವೆಂಕಟೇಶ್ ಮೂರ್ತಿ ಇನ್ನಿಲ್ಲ.
ಕನ್ನಡದ ಖ್ಯಾತ ಗೀತಸಾಹಿತಿ, ಬರಹಗಾರ, ಕನ್ನಡ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಎಚ್ಎಸ್ ವೆಂಕಟೇಶ್ ಮೂರ್ತಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಇದರೊಂದಿಗೆ ಕನ್ನಡ ಸಾಹಿತ್ಯ ಲೋಕದ ಪ್ರಮುಖ ಕೊಂಡಿಯೊಂದು ಕಳೆದುಕೊಂಡಂತಾಗಿದೆ.
ಟಿಎನ್ ಸೀತಾರಾಮ್ ಅವರ ಮುಕ್ತ ಧಾರವಾಹಿಯ ಟೈಟಲ್ ಸಾಂಗ್, ಕಿರಿಕ್ ಪಾರ್ಟಿಯ ತೂಗು ಮಂಚದಲ್ಲಿ ಕೂತು ಹಾಡುಗಳು ಸಿನಿ ರಸಿಕರು ಎಂದೂ ಮರೆಯದ ಹಾಡುಗಳಾಗಿದೆ. ಇದಲ್ಲದೆ ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ.
ದಾವಣಗೆರೆಯವರಾದ ಅವರು 1944 ರಲ್ಲಿ ಜನಿಸಿದರು. ಬೆಂಗಳೂರು ವಿವಿಯಲ್ಲಿ ಕನ್ನಡ ಎಂಎ ಪದವಿ ಪಡೆದು ಬಳಿಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಕಥನ ಕವನಗಳು ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಬಂದಿತ್ತು. ಕನ್ನಡದಲ್ಲಿ ಕತೆ, ಕವನ, ಕಾದಂಬರಿ, ನಾಟಕ ಸೇರಿದಂತೆ 100 ಕ್ಕೂ ಹೆಚ್ಚು ಕೃತಿಗಳನ್ನು ಬರೆದವರು. ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಲೋಕ ಕಂಬನಿ ಮಿಡಿಯುತ್ತಿದೆ.