ಬೆಂಗಳೂರು: ಕೇಸರಿ ಶಾಲು ಧರಿಸಿದ್ದಕ್ಕೆ ಟ್ರಾವೆಲ್ ಏಜೆನ್ಸಿ ಉದ್ಯೋಗಿಗಳ ಮೇಲೆ ಹಲ್ಲೆ ಮತ್ತು ನಿಂದನೆ ಮಾಡಿದ ಆರೋಪದಡಿಯಲ್ಲಿ ಮೂವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಕೇಸರಿ ಶಾಲು ಧರಿಸಿದ್ದಕ್ಕಾಗಿ ಕಿರುಕುಳಕ್ಕೊಳಗಾದ ಕೆಲಸಗಾರನನ್ನು ಬಿಹಾರ ಮೂಲದ ಸುರೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಇನ್ನೂ ಸುರೇಂದ್ರ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಂಧಿತರನ್ನು ತಬ್ರೇಜ್ (30), ಇಮ್ರಾನ್ ಖಾನ್ (35) ಮತ್ತು ಅಜೀಜ್ ಖಾನ್ (47) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಆಗಸ್ಟ್ 24 ರಂದು ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದ ಎದುರಿನ ರಾಯಲ್ ಟ್ರಾವೆಲ್ಸ್ ಕಚೇರಿ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಳೆದ 15 ವರ್ಷಗಳಿಂದ ಟ್ರಾವೆಲ್ ಏಜೆನ್ಸಿಯಲ್ಲಿ ಲೋಡಿಂಗ್ ಇನ್‌ಚಾರ್ಜ್ ಆಗಿ ಕೆಲಸ ಮಾಡುತ್ತಿರುವ ಹರಿಕೃಷ್ಣ ಎಂಬುವವರು ನೀಡಿರುವ ದೂರಿನ ಮೇರೆಗೆ ಆಗಸ್ಟ್ 25 ರಂದು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2) (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು), 302 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ನಿಂದನೆ, ಇತ್ಯಾದಿ), 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.