Publish Date: Thu, 07 Mar 2024 (10:53 IST)
Updated Date: Thu, 07 Mar 2024 (10:57 IST)
ಮಂಡ್ಯ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಗೆ ಒತ್ತಡ ಬರುತ್ತಿದೆ. ಜೆಡಿಎಸ್ ನಾಯಕರೇ ಮಂಡ್ಯದಿಂದ ಸ್ಪರ್ಧಿಸಲು ಕುಮಾರಸ್ವಾಮಿ ಮೇಲೆ ಒತ್ತಡ ಹೇರುತ್ತಿದ್ದಾರೆ.
ಬಿಜೆಪಿ ಜೊತೆಗೆ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮಂಡ್ಯ ಕ್ಷೇತ್ರದ ಟಿಕೆಟ್ ಗಾಗಿ ಪಟ್ಟು ಹಿಡಿದಿದೆ. ಆದರೆ ಇನ್ನೊಂದೆಡೆ ಮಂಡ್ಯದಿಂದಲೇ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಶ್ ಹಠ ಹಿಡಿದು ಕುಳಿತಿದ್ದಾರೆ. ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರು ಕುಮಾರಸ್ವಾಮಿಗೆ ಮಂಡ್ಯ ಟಿಕೆಟ್ ಗೆ ಬೇಡಿಕೆಯಿಡಲು ಸೂಚಿಸಿದ್ದಾರೆ.
ಆದರೆ ಕುಮಾರಸ್ವಾಮಿಗೆ ಸದ್ಯಕ್ಕೆ ಮಂಡ್ಯದಿಂದ ಸ್ಪರ್ಧಿಸುವ ಇರಾದೆ ಇಲ್ಲ ಎನ್ನಲಾಗಿದೆ. ಹಾಗಿದ್ದರೆ ಅವರ ಬದಲು ಪುಟ್ಟರಾಜು ಅವರನ್ನಾದರೂ ಕಣಕ್ಕಿಳಿಸಿ. ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಡಿ ಎಂದು ಕುಮಾರಸ್ವಾಮಿಗೆ ಜೆಡಿಎಸ್ ನಾಯಕರು ಒತ್ತಾಯ ಮಾಡಿದ್ದಾರಂತೆ.
ಸದ್ಯಕ್ಕೆ ಪಕ್ಷದಲ್ಲಿರುವ ಭಿನ್ನಮತ ನಿವಾರಿಸೋಣ. ಮಂಡ್ಯದಿಂದ ಒಮ್ಮತದ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ. ಬಿಜೆಪಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳೋಣ ಎಂದು ಕುಮಾರಸ್ವಾಮಿಯವರು ತಮ್ಮ ಪಕ್ಷದ ಮುಖಂಡರನ್ನು ಸಮಾಧಾನಿಸಿದ್ದಾರೆ ಎಂದು ತಿಳಿದುಬಂದಿದೆ.