Publish Date: Wed, 28 Jan 2026 (17:16 IST)
Updated Date: Wed, 28 Jan 2026 (17:18 IST)
ಬೆಂಗಳೂರು: ನಗರದ ಜಯನಗರ ಕ್ಷೇತ್ರದ ವಿಧಾನಸಭೆ ಚುನಾವಣೆ ಫಲಿತಾಂಶ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದೆ.
2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ವಿರುದ್ಧ ಕೇವಲ 16 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗ ಮತ ಎಣಿಕೆ ಸರಿಯಾಗಿ ನಡೆದಿರಲಿಲ್ಲ ಎಂದು ಸೌಮ್ಯ ರೆಡ್ಡಿ ಕಣ್ಣೀರು ಹಾಕಿದ್ದರು.
ಈ ಸಂಬಂಧ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಪ್ರಕರಣದ ಟ್ರಯಲ್ ಗೆ ತಡೆ ಕೋರಿ ಸಿಕೆ ರಾಮಮೂರ್ತಿ ಕೂಡಾ ತಕರಾರು ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ರಾಮಮೂರ್ತಿ ಅರ್ಜಿಯನ್ನು ತಳ್ಳಿ ಹಾಕಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಇದೀಗ ಸುಪ್ರೀಂಕೋರ್ಟ್ ಕೂಡಾ ಸಿಕೆ ರಾಮಮೂರ್ತಿ ಟ್ರಯಲ್ ಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿದೆ. ಈ ಮೂಲಕ ಬಿಜೆಪಿ ಶಾಸಕರಿಗೆ ಹಿನ್ನಡೆಯಾಗಿದೆ. ಜಯನಗರ ಕ್ಷೇತ್ರದಲ್ಲಿ ಮೊದಲು ಸೌಮ್ಯ ರೆಡ್ಡಿ 116 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ನಂತರ ಗೊಂದಲಗಳಿಂದಾಗಿ ಮರು ಎಣಿಕೆಯಾಗಿ ಸಿಕೆ ರಾಮಮೂರ್ತಿ 16 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮತ ಎಣಿಕೆ ಸಮರ್ಪಕವಾಗಿ ನಡೆದಿಲ್ಲ, 837 ಅಂಚೆ ಮತಗಳ ಮರು ಎಣಿಕೆ ಆಗಬೇಕು ಎಂದು ಸೌಮ್ಯ ರೆಡ್ಡಿ ಕೋರ್ಟ್ ಮೊರೆ ಹೋಗಿದ್ದಾರೆ.