ಬೆಂಗಳೂರು: ನಮ್ಮ ಮನೆ ಸುಟ್ಟಿರೋದು ರಜಾಕರ್‌ಗಳು, ಮುಸ್ಲಿಮರಲ್ಲ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೌಂಟರ್ ಕೊಟ್ಟಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಯೋಗಿ ಆದಿತ್ಯನಾಥ್ ಅವರಿಗೆ ಖರ್ಗೆ ಸಾಹೇಬರ ಇತಿಹಾಸ ಗೊತ್ತಿಲ್ಲ. ನಮ್ಮನೆ ಸುಟ್ಟು ಹಾಕಿದ್ದು ರಝಾಕರು, ಮುಸ್ಲಿಮರಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈಚೆಗೆ ಯೋಗಿ ಆದಿತ್ಯನಾಥ್ ಅವರು ರಝಾಕರಿಂದ ಖರ್ಗೆಯವರ ತಾಯಿ, ಸಹೋದರಿ ಸುಟ್ಟು ಹೋದರೂ, ಈ ಬಗ್ಗೆ ಖರ್ಗೆ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ಸುಟ್ಟಿದ್ದು ನಮ್ಮನೆ, ಜೀವ ಹೋಗಿದ್ದು ನಮ್ಮವರದ್ದು, ಇದರಿಂದ ಯೋಗಿಗೆ ಏನಾಗಬೇಕು? ಆ ಘಟನೆಗೆ ಇಡೀ ಮುಸ್ಲಿಂ ಸಮುದಾಯವನ್ನು ದೂರುವುದಕ್ಕೆ ಆಗುತ್ತಾ ಎಂದು ಕಿಡಿಕಾರಿದರು.
ಒಂದು ಸಮುದಾಯದ ಕೆಲವರಿಂದ ಮೋಸ ಆಗುತ್ತೆ ಎಂದಾದರೆ ಇಡೀ ಸಮುದಾಯವನ್ನು ಹೊಣೆ ಮಾಡಲಾಗುತ್ತಾ? ಹಾಗೆಯೇ ಇದರಲ್ಲಿ ಇಡೀ ಮುಸ್ಲಿಮರಿಗೆಲ್ಲ ಆರೋಪ ಮಾಡಲು ಆಗುತ್ತಾ? ಇದೆಲ್ಲ ಈಗ ಅಪ್ರಸ್ತುತ ಚರ್ಚೆ. ಇಷ್ಟೆಲ್ಲಾ ಮಾತನಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ಮೊದಲು ಬಿಜೆಪಿ, ಆರ್‌ಎಸ್‌ಎಸ್ ಸಿದ್ಧಾಂತಗಳಲ್ಲಿ ಸಮಾನತೆ ತರಲಿ. ಬಿಜೆಪಿಯವರು ಅಪಾಯದಲ್ಲಿದ್ದರೆ ಮಾತ್ರ ಆಗ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರೋರು ಬಿಜೆಪಿಯವರು, ಹಿಂದೂಗಳಲ್ಲ. ತಾವು ಅಪಾಯದಲ್ಲಿ ಇದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ಳುತ್ತಾರೆ ಎಂದು ಹರಿಹಾಯ್ದರು.