ಯುವ ವಿಜ್ಞಾನಿಯೊಬ್ಬ ಅರಳುವ ಮುನ್ನವೇ ಹುಚ್ಚನಾಗಿದ್ದ ಕರುಣಾಜನಕ ಕಥೆ ಇದು. ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿಯಾಗಿದ್ದ ರಾಜೇಶ್ ಎಂಬ ಹೆಸರಿನ ಯುವಕನೊಬ್ಬ ಕಳೆದ ಕೆಲ ತಿಂಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಆತನಿಗಾಗಿ ಎಷ್ಟೇ ಹುಡುಕಾಡಿದ್ದರೂ, ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆದರೆ, ಮಂಗಳೂರಿನ ಸಮೀಪ ಎರಡು ತಿಂಗಳ ಹಿಂದೆ ಆತ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಅಲ್ಲಿಯದೇ ಸಂಸ್ಥೆಯೊಂದರಲ್ಲಿ ಈಗ ಆರೋಗ್ಯ ಸುಧಾರಿಸಿಕೊಂಡು ಮನೆಗೆ ಮರಳಿದ್ದಾನೆ. ಆತನ ನೋವಿನ ಕಥೆಯನ್ನು ನೀವೇ ಓದಿ...
ಕಳೆದೆರಡು ತಿಂಗಳ ಹಿಂದೆ ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆ ಬಳಿ ಮಾನಸಿಕ ಅಸ್ವಸ್ಥ ಯುವಕನೊಬ್ಬ ಕಾಣಿಸಿಕೊಂಡಿದ್ದ. ಈ ಕುರಿತು ಸ್ಥಳೀಯರೊಬ್ಬರು ದಕ್ಷಿಣ ಕನ್ನಡದ ಗಡಿಯ ತಲಪಾಡಿಯಲ್ಲಿರುವ ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ಸ್ಥಾಪಕ ಜೋಸೆಫ್ ಕ್ರಾಸ್ತರಿಗೆ ಸುದ್ದಿ ಮುಟ್ಟಿಸಿದ್ದರು.
ಜೋಸೆಫ್ ಆ ಯುವಕನನ್ನು ತಮ್ಮ ಸಂಸ್ಥೆಗೆ ಕರೆದೊಯ್ದು ಸ್ನಾನ ಮಾಡಿಸಿ, ಬೇರೆ ಬಟ್ಟೆ ಹಾಕಿಸಿ ಚಿಕಿತ್ಸೆಯನ್ನು ನೀಡಲು ಆರಂಭಿಸಿದ್ದರು. ಆತ ಪದೇ ಪದೇ ಹೆಲಿಕಾಫ್ಟರ್, ಅಬ್ದುಲ್ ಕಲಾಂ ಎಂದು ಬಡಬಡಿಸುತ್ತಿದ್ದದ್ದು, ಟ್ರಸ್ಟ್‌ನವರಿಗೆ ಆಶ್ಟರ್ಯ ಮೂಡಿಸುತ್ತಿತ್ತು. ಆತನ ಆರೋಗ್ಯ ಸ್ವಲ್ಪ ಸುಧಾರಿಸಿದ ಮೇಲೆ ನೀನು ಯಾರೆಂದು ಕೇಳಲಾಗಿ ನಾನೊಬ್ಬ ವಿಜ್ಞಾನಿ ಎಂದಾತ ಹೇಳಿದ್ದಾನೆ.
ಗೂಗಲ್ ಸರ್ಚ್ ಮಾಡಿದಾಗ ಆತ ಹೇಳಿದ್ದು ನಿಜ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲದೆ ಮಾಜಿ ರಾಷ್ಟ್ರಪತಿ ಅಬ್ಲುಲ್ ಕಲಾಂ ಅವರೊಟ್ಟಿಗಿದ್ದ ಫೋಟೋಗಳು ಸಹ ಪತ್ತೆಯಾಗಿವೆ. ತಕ್ಷಣ ಆತನ ಮನೆಯವರನ್ನು ಸಂಪರ್ಕಿಸಿದ ಸಂಸ್ಥೆಯವರು ವಿಳಾಸವನ್ನು ಪಡೆದುಕೊಂಡು ಮಾಹಿತಿ ನೀಡಿದ್ದಾರೆ. ನಿನ್ನೆ ಮಂಗಳೂರಿಗೆ ಆಗಮಿಸಿದ್ದ ಪೋಷಕರು ರಾಜೇಶ್ ಅವರನ್ನು ಮನೆಗೆ ಕರೆದೊಯ್ದಿದ್ದಾರೆ.
ನಿಜಕ್ಕೂ ಅವರಿಗಾಗಿದ್ಯೇನು?
ರಾಜೇಶ್ ನಾರಾಯಣ ಅಗಳೆ(40) ಅಬ್ಲುಲ್ ಕಲಾಂ ಅವರ ಕಟ್ಟಾ ಅಭಿಮಾನಿಯಾಗಿದ್ದು ತಾನು ಕೂಡ ಅವರಂತೆ ದೊಡ್ಡ ವಿಜ್ಞಾನಿಯಾಗಬೇಕೆಂದುಕೊಂಡಿದ್ದ. ಆ ದಿಶೆಯಲ್ಲಿ ಕಾರ್ಯಪ್ರವೃತ್ತನಾಗಿದ್ದ ಆತ ಕೊಲ್ಲಾಪುರದಲ್ಲಿ ಆವಿಷ್ಕಾರ್ ಬಾಲವಿಜ್ಞಾನ ಕೇಂದ್ರವನ್ನು ಸ್ಥಾಪಿಸಿ ಮಕ್ಕಳಿಗೆ ವಿಜ್ಞಾನದ ಪಾಠವನ್ನು ಹೇಳಿಕೊಡುತ್ತಿದ್ದ ಅವನು ಆಗಾಗ ಬೆಂಗಳೂರಿನ ಇಸ್ರೋಗೆ ಬಂದು ಹೋಗುತ್ತಿದ್ದ.
ಡಾಕ್ಟರ್ ಅಬ್ದುಲ್ ಕಲಾಂ ಅವರ ಜತೆ ಸತತ ಸಂಪರ್ಕ ಇಟ್ಟುಕೊಂಡಿದ್ದ ಆತ ಒಂದು ದಿನ ಇಸ್ರೋಗೆ ಬರುವಾಗ ತನ್ನ ಲ್ಯಾಪ್‌ಟಾಪ್ ಕಳೆದುಕೊಂಡಿದ್ದ. ಅದರಲ್ಲಿ ಅನೇಕ ಗೌಪ್ಯ ಮಾಹಿತಿಗಳು ಇದ್ದವೆಂದು ಹೇಳಲಾಗುತ್ತಿದೆ. ಅದನ್ನು ಕಳೆದುಕೊಂಡಿದ್ದಕ್ಕೆ ತೀವ್ರ ಖಿನ್ನನಾದ ಆತ ಒಂದು ದಿನ ಮನೆಯಿಂದ ನಾಪತ್ತೆಯಾಗಿದ್ದ. ಹಾಗೆ ಅಲೆಮಾರಿಯಾಗಿ ಓಡಾಡುತ್ತ ಮಂಗಳೂರಿಗೆ ತಲುಪಿದ್ದ ಆತನ ಮಾನಸಿಕ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು ಮತ್ತೆ ತನ್ನ ಕನಸಿನತ್ತ ಹೆಜ್ಜೆ ಹಾಕುವ ಹುಮ್ಮಸ್ಸಿನಲ್ಲಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .