ಬೆಂಗಳೂರು : ಈ ಹಿಂದೆ ಚಿತ್ರದುರ್ಗದಲ್ಲಿ ಒಳಮೀಸಲಾತಿ ಕೊಡುವ ನಿರ್ಣಯ ಮಾಡಿದ್ದೆವು.ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲಿ ಕೊಡುವುದಾಗಿ ಹೇಳಿದ್ದೆವು. ಬಿಜೆಪಿ ಸರ್ಕಾರ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿತ್ತು. ಅದರ ಪ್ರಕಾರ ಎಸ್ಸಿ ಸಮುದಾಯದ 101 ಜಾತಿಗಳನ್ನು ನಾಲ್ಕು ಭಾಗ ಮಾಡಿ ಒಳಮೀಸಲು ವರ್ಗೀಕರಣ ಮಾಡಿದ್ದರು. ಅವರು ಹಂಚಿಕೆ ಮಾಡಿದ್ದ ಒಳಮೀಸಲಾತಿ ಅವೈಜ್ಞಾನಿಕ ಅಂತ ಅವರಿಗೂ ಗೊತ್ತು. ನಾವು ಕಾನೂನು ಅಭಿಪ್ರಾಯ ಪಡೆದು ಕೇಂದ್ರಕ್ಕೆ ಸಂವಿಧಾನ ತಿದ್ದುಪಡಿ ಮಾಡಿ ಅಂತ ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಗೃಹಸಚಿವರು ಹೇಳಿದ್ದಾರೆ.
ನಾವು ಜವಾಬ್ದಾರಿಯಿಂದ ನುಣುಚಿಕೊಂಡಿಲ್ಲ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿದ್ರೆ ಒಳಮೀಸಲಾತಿ ಕೊಡಬಹುದು ಎಂದು ನುಡಿದ ಜಿ. ಪರಮೇಶ್ವರ್ ಬಿಜೆಪಿಯವರು ಏನೇ ವಿಶ್ಲೇಷಣೆ ಮಾಡಬಹುದು.ಆದ್ರೆ ನಮ್ಮ ಕ್ರಮ ಸರಿಯಾಗಿದೆ.ಮೀಸಲಾತಿ, ಒಳಮೀಸಲಾತಿ ಎಲ್ಲವೂ ಸಂವಿಧಾನದ ಚೌಕಟ್ಟಿನಲ್ಲೇ ಆಗಬೇಕು ಎಂದರು.
ಒಳಮೀಸಲಾತಿ ನೀಡುವುದು ಬಿಡುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಶುಕ್ರವಾರ ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿ ಮಾಡಿದರೆ ಮಾತ್ರ ಒಳ ಮೀಸಲಾತಿ ನೀಡಬಹುದು. ಆದರೆ ಎಲ್ಲವೂ ಸಂವಿಧಾನದ ಚೌಕಟ್ಟಿನಲ್ಲೇ ಆಗಬೇಕಿದೆ ಎಂದರು.