ಬೆಂಗಳೂರು :ರಾಜ್ಯದ ಶಾಲಾ-ಕಾಲೇಜುಗಳ ನಡುವೆ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳು ಸ್ಥಳಾಂತರಕ್ಕೆ ಇಂಧನ ಇಲಾಖೆಯು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿತು, 1783 ಅಪಾಯಕಾರಿ ಮಾರ್ಗಗಳಿಗೆ ಹೊಸ ಮಾರ್ಗಕ್ಕೆ ವ್ಯವಸ್ಥೆ ಇದೆ.
ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಿರುವ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ಬಾಕಿ ಉಳಿದಿರುವ ಅಪಾಯಕಾರಿ ಮಾರ್ಗಗಳ ಬದಲಾವಣೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಕಳೆದ ಆಗಸ್ಟ್ 15ರಂದು ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನಡೆಸುತ್ತಿದ್ದ ಶಾಲಾ ವಿದ್ಯಾರ್ಥಿಯು ಹಾದು ಹೋಗಿದ್ದ ಅಪಾಯಕಾರಿ ವಿದ್ಯುತ್ ಮಾರ್ಗಕ್ಕೆ ಧ್ವಜ ತಗುಲಿ ವಿದ್ಯಾರ್ಥಿಯೊಬ್ಬರು ಆಯ್ಕೆಯಾಗಿದ್ದಾರೆ. ಹಾಸನದಲ್ಲೂ ಇದೇ ಬಗೆಯ ಘಟನೆ ನಡೆದಿತ್ತು.
ಶಾಲಾ- ಕಾಲೇಜು ಹಾದಿ ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳಿಂದಾಗಿ ರಾಜ್ಯಾದ್ಯಂತ ತೊಂದರೆ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದ ಸಚಿವ ಸುನೀಲ್ ಕುಮಾರ್ ತುರ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು.
ಶಾಲಾ- ಕಾಲೇಜು ಆವರಣದಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗ ಗುರುತಿಸಿ ಬದಲಿ ಮಾರ್ಗ ಕಲ್ಪಿಸುವ ಅಥವಾ ಎಬಿ ಕೇಬಲ್ ಅಳವಡಿಸುವಂತೆ ಆಗಷ್ಟ್ ೧೯ ರಂದು ಎಲ್ಲ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಪತ್ರ ಬರೆದು ಸೂಚನೆ ನೀಡಲಾಗಿತ್ತು.
ರಾಜ್ಯದಲ್ಲಿ ಒಟ್ಟು 6886 ಇಂಥ ಅಪಾಯಕಾರಿ ಮಾರ್ಗಗಳು ಶಾಲಾ- ಕಾಲೇಜು ಆವರಣದಲ್ಲಿ ಹಾದು ಹೋಗಿರುವುದನ್ನು ಗುರುತಿಸಲಾಗಿದ್ದು, ಆದೇಶ ನೀಡಿದ ಮೂರೇ ತಿಂಗಳಲ್ಲಿ ೧೭೮೩ ಮಾರ್ಗಗಳನ್ನು ಬದಲಿಸಿ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನುಳಿದ4997 ಮಾರ್ಗಗಳ ಬದಲಾವಣೆ ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ದಿನದಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ 114.50 ಕೋಟಿ ರೂ.ನ್ನು ಇಂಧನ ಇಲಾಖೆ ವೆಚ್ಚ ಮಾಡುತ್ತಿದೆ.
ಬೆಸ್ಕಾಂ ವ್ಯಾಪ್ತಿಯಲ್ಲೇ ಇಂಥ ಅತಿ ಹೆಚ್ಚು ಮಾರ್ಗಗಳು ಕಂಡು ಬಂದಿದ್ದು 2299 ಸ್ಥಳ ಗುರಿತಿಸಲಾಗಿದೆ. ಈ ಪೈಕಿ 157 ಕಡೆ ಹೊಸ ಮಾರ್ಗ ಅಳವಡಿಸಲಾಗಿದ್ದು, 2147 ಮಾರ್ಗ ಬದಲಾವಣೆ ಪ್ರಗತಿಯಲ್ಲಿದೆ. ಚೆಸ್ಕಾಂ ವ್ಯಾಪ್ತಿಯ 881 ರ ಪೈಕಿ 809, ಮೆಸ್ಕಾಂನ 1323 ರ ಪೈಕಿ 116, ಹೆಸ್ಕಾಂನ 1721ರ ಪೈಕಿ 228 ಹಾಗೂ ಜೆಸ್ಕಾಂ ವ್ಯಾಪ್ತಿಯ 662ರ ಪೈಕಿ 473 ಅಪಾಯಕಾರಿ ಮಾರ್ಗಗಳನ್ನು ಸರಿಪಡಿಸಲಾಗಿದ್ದು, 4997 ಮಾರ್ಗಗಳಿಗೆ ಸದ್ಯದಲ್ಲೇ ಕಾಯಕಲ್ಪ ಸಿಗಲಿದೆ. ಇಂಧನ ಇಲಾಖೆಯ ಈ ಕ್ರಮದಿಂದ ವಿದ್ಯಾರ್ಥಿಗಳು , ಶಿಕ್ಷಕರು ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕೋಟ್ :
ಸ್ವಾತಂತ್ರ್ಯ ದಿನಾಚರಣೆಯ ದಿನ ತುಮಕೂರಿನಲ್ಲಿ ನಡೆದ ಈ ಘಟನೆ ಎಲ್ಲರಲ್ಲೂ ಬೇಸರ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳ ಆವರಣದಲ್ಲಿ ಹಾದು ಹೋಗಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳ ಬದಲಾವಣೆಗೆ ಸೂಚನೆ ನೀಡಲಾಗಿತ್ತು. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಲಾಗುತ್ತಿದೆ. ಬಾಕಿ ಇರುವ ಮಾರ್ಗ ಬದಲಾವಣೆ ಕಾರ್ಯ ಕೆಲವೇ ದಿನದಲ್ಲಿ ಮುಕ್ತಾಯಗೊಳ್ಳುತ್ತದೆ. ಈ ಬಗ್ಗೆ ನಾನೇ ಖುದ್ದು ಪರಿಶೀಲನೆ ನಡೆಸಿದ್ದೇನೆ.
ವಿ.ಸುನೀಲ್ ಕುಮಾರ್, ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವರು.