ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮೇಲ್ಮನವಿಗೆ ನ್ಯಾಯ ಸಿಗುವ ಬದಲು ಶಿಕ್ಷೆ ಸಿಕ್ಕಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪಿನ ನಂತರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲಿಸಿ ಎಂದು ನಾನೇ ಹೇಳಿದ್ದೇನೆ. ಕರ್ನಾಟಕ ಪರ ವಕೀಲ ನಾರಿಮನ್, ಅನಿಲ್ ದಿವಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ಚರ್ಚಿಸಿದ್ದೇನೆ. ಸಾರ್ವಜನಿಕರು ತಮ್ಮ ನೋವು ವ್ಯಕ್ತಪಡಿಸಲು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವ ವ್ಯವಸ್ಥೆಯ ಹಕ್ಕು ಎಂದು ಸುಪ್ರೀಂ ಹೇಳಿತ್ತು ಎಂದರು.
ವೈಮಾನಿಕ ಸಮೀಕ್ಷೆ ಮಾಡಿ ನೋಡಿದ್ದೇನೆ. ರಾಜ್ಯದಲ್ಲಿ ಬೇಸಾಯ ಹಾಗೂ ಕುಡಿಯುವ ನೀರಿಗೂ ಆತಂಕವಿದೆ. ನಾನು ನೀರು ಬಿಡಿ ಎಂದು ಹೇಳಿ ಮನೆಯಲ್ಲಿ ಕೂರಲಿಲ್ಲ. ವಾಸ್ತವ ಸ್ಥಿತಿ ಕುರಿತು ಎಲ್ಲರನ್ನು ಭೇಟಿಯಾಗಿ ವಿವರಿಸಿದ್ದೇನೆ. ಮೆಟ್ಟೂರು ಜಲಾಶಯದಲ್ಲಿ ನೀರಿನ ಸಂಗ್ರಹ ಕುರಿತು ರಾಜ್ಯದ ಪರ ವಕೀಲರು ನೀಡಿರುವ ಮಾಹಿತಿ ಕುರಿತು ಅನುಮಾನವಿದ್ದರೆ ಪರಿಶೀಲನೆ ನಡೆಸಬಹುದಿತ್ತು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ