ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ವ್ಯಕ್ತವಾದ ಬೆನ್ನಲ್ಲೇ ಸಾರಿಗೆ ಇಲಾಖೆಯ ಮೋಟಾರ್ ವಾಹನ ಇನ್‌ಸ್ಪೆಕ್ಟರ್ ಮಂಜುನಾಥ ಕೊರವಿ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಲ್ದಾಳೆ ಅವರೊಂದಿಗಿನ ಸಂಭಾಷಣೆಯ ವಿಡಿಯೊಗಳು ಚರ್ಚೆಗೆ ಕಾರಣವಾಗಿತ್ತು. ಬಳಿಕ ಮಂಜುನಾಥ ಕೊರವಿ ಅವರನ್ನು ಸಾರಿಗೆ ಇಲಾಖೆಯ ಕಾಗದ ಪತ್ರಗಳ ವಿಭಾಗಕ್ಕೆ ವರ್ಗ ಮಾಡಲಾಗಿತ್ತು. ಇದೀಗ ಶಾಸಕ ಬೆಲ್ದಾಳೆ ಅವರು ಕೊರವಿ ವಿರುದ್ಧ ಸರ್ಕಾರಕ್ಕೆ ಹಕ್ಕುಚ್ಯುತಿ ಕುರಿತು ದೂರು ಸಲ್ಲಿಸಿದ ಕಾರಣ ಅಮಾನತುಗೊಳಿಸಲಾಗಿದೆ.
ಆದೇಶದಲ್ಲಿ ಅಮಾನತು ಅವಧಿ ಕೊನೆಗೊಂಡ ನಂತರ ಜಾರಿಗೆ ಬರುವಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ವರ್ಗಾಯಿಸಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಘಟನೆ ಹಿನ್ನೆಲೆ: ಕಳೆದ ಅಕ್ಟೋಬರ್ 29ರ ರಾತ್ರಿ 10ಗಂಟೆ ಸುಮಾರಿಗೆ ಶಾಸಕ ಬೆಲ್ದಾಳೆ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾಲ್ಕಿ ರಸ್ತೆ ಮೂಲಕ ತೆರಳುತ್ತಿದ್ದರು. ನೌಬಾದ್- ಲಾಲ್‌ಬಾಗ್ ಸಮೀಪ ರಸ್ತೆಯ ಎರಡೂ ಬದಿ ವಾಹನಗಳನ್ನು ತಡೆದು ನಿಲ್ಲಿಸಲಾಗಿತ್ತು. ಇದನ್ನು ನೋಡಿದ ಶಾಸಕರು ಮಂಜುನಾಥ ಬಳಿ ತೆರಳಿ ರಾತ್ರಿ ಹೊತ್ತು ಇಷ್ಟೊಂದು ವಾಹನಗನ್ನು ಯಾಕೆ ತಡೆದು ನಿಲ್ಲಿಸಿದ್ದೀರಿ. ಮಹಿಳೆಯರು, ಮಕ್ಕಳು ರಸ್ತೆಬದಿ ನಿಂತಿದ್ದಾರೆ. ಬೇಗ ಪರಿಶೀಲಿಸಿ ಕಳಿಸಿಕೊಡಬೇಕು. ಹೆಲ್ಮೆಟ್ ಇದ್ದರೂ ಬೈಕ್ ಸವಾರರನ್ನೇಕೆ ತಡೆದಿದ್ದೀರಿ? ಜನರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ.
ಇದರಿಂದ ಕೆರಳಿದ ಮಂಜುನಾಥ, ನಿಮ್ಮಂಥ ಲೀಡರ್‌ಗಳನ್ನು ಎಲ್ಲೆಡೆ ನೋಡಿದ್ದೇನೆ. ನೀವು ಮಂತ್ರಿ, ಎಂಎಲ್‌ಎ ಇರಬಹುದು. ನೀವು ಎಂಎಲ್‌ಎ ಅಂತ ನನಗೆ ಗೊತ್ತಿಲ್ಲ. ನಿಮ್ಮನ್ನು ಫಸ್ಟ್ ಟೈಮ್ ನೋಡ್ತಾ ಇದ್ದೀನಿ ಎಂದು ಶಾಸಕರು ಹಾಗೂ ಅವರ ಬೆಂಬಲಿಗರತ್ತ ಕೈಎತ್ತಿ ಚುಟುಕಿ ಹೊಡೆದು ಸವಾಲು ಹಾಕುವ ರೀತಿಯಲ್ಲಿ ಮಾತನಾಡಿದ್ದರು.'<>