ಹುಬ್ಬಳ್ಳಿ: ಉಗ್ರರ ಹತ್ಯೆಯಲ್ಲೂ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಿರುವುದು ದೇಶದ ಘೋರ ದುರಂತಗಳಲ್ಲೊಂದು ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಮತಬ್ಯಾಂಕ್ ರಾಜಕಾರಣಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎನ್ನುವುದನ್ನು ಭೋಪಾಲ್ ನಲ್ಲಿ ಪೊಲೀಸರು ಉಗ್ರರನ್ನು ಹೊಡೆದುರುಳಿಸಿರುವ ಪ್ರಕರಣದಲ್ಲಿ ಸಾಬೀತು ಪಡಿಸಿದ್ದಾರೆ. ಎಂಟು ಸಿಮಿ ಉಗ್ರರನ್ನು ಪೊಲೀಸರು ಎನ್ಕೌಂಟರ್ ನಲ್ಲಿ ಹೊಡೆದುರುಳಿಸಿದ್ದಾರೆ. ಆದರೆ ಉಗ್ರಗಾಮಿಗಳ ಹತ್ಯೆಯಲ್ಲಿಯೂ ಅಪಸ್ವರವೆತ್ತಿ ರಾಜಕೀಯ ಮಾಡುವ ಮೂಲಕ ಕಾಂಗ್ರೆಸ್ ಮುಖಂಡರು ಭದ್ರತಾ ಪಡೆಗಳ ಮನೋಸ್ಥೈರ್ಯ ಕುಗ್ಗಿಸುತ್ತಿದ್ದಾರೆ. ಇಂಥ ಕೀಳು ಮಟ್ಟಷ ರಾಜಕೀಯ ದೇಶಕ್ಕೆ ಶೋಭೆ ತರುವಂತಹದ್ದಲ್ಲ ಎಂದರು.
ಎನ್ಕೌಂಟರ್ ಗೆ ಬಲಿಯಾದ ಸಿಮಿ ಉಗ್ರರು ಧಾರವಾಡ, ಹುಬ್ಬಳ್ಳಿ ಸೇರಿದಂತೆ ರಾಜ್ಯ ವ್ಯಾಪಿ ಸಂಪರ್ಕ ಹೊಂದಿದ್ದರು ಎಂಬುದು ತಿಳಿದು ಬಂದಿದೆ. ಇವರು ಇನ್ನಷ್ಟು ಉಗ್ರರನ್ನು ಇಲ್ಲಿ ಹುಟ್ಟುಹಾಕಿರುವ ಸಂದೇಹವೂ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿಬೇಕಿದೆ. ಜನರ ಮನದಲ್ಲಿ ಈ ವಿಷಯವಾಗಿ ಆತಂಕ ಮನೆ ಮಾಡಿದೆ ಎಂದು ಶೆಟ್ಟರ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ವೈಖರಿಯಿಂದ ಬೇಸತ್ತಿರುವ ಸ್ವಪಕ್ಷಿಯರೇ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲು ಖಚಿತ ಎನ್ನುವುದು ಅವರೆಲ್ಲರಿಗೂ ಈಗಲೇ ಅರಿವಿಗೆ ಬಂದಿದೆ. ಹಠಮಾರಿ ಮುಖ್ಯಮಂತ್ರಿಯ ಧೋರಣೆಯಿಂದಾಗಿ ಆಡಳಿತ ವ್ಯವಸ್ಥೆಯೇ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಬೆಂಗಳೂರಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಹಾಗೂ ಟಿಪ್ಪು ಸುಲ್ತಾನ್ ಜಯಂತಿ ಬೇಡವೆಂದು ರಾಜ್ಯಾದ್ಯಂತ ವಿರೋಧವಿದ್ದರೂ ಹಠಕ್ಕೆ ಬಿದ್ದಂತೆ ಸರಕಾರ ವರ್ತಿಸುತ್ತಿದೆ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ