ಹುಬ್ಬಳ್ಳಿ: ಕರ್ನಾಟಕದ ರಾಜಧಾನಿಯಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆ ಎನ್ನುವುದು ಗೊತ್ತಿತ್ತು. ಇಂಗ್ಲೀಷ್ ಹಾಗೂ ತಮಿಳು ಭಾಷೆಯಿಂದ ಕನ್ನಡ ನೆಲ ಕಚ್ಚುತ್ತಿದೆ ಎನ್ನುವುದೂ ಎಲ್ಲರೂ ತಿಳಿದ ವಿಷಯವೇ. ಆದರೆ, ಶೇ.22 ರಷ್ಟು ಜನ ಮಾತ್ರ ಅಲ್ಲಿ ಕನ್ನಡ ಭಾಷೆ ಮಾತನಾಡುತ್ತಾರೆ ಎಂದರೆ ತುಸು ಗಂಭೀರವಾಗಿ ಚಿಂತಿಸಬೇಕಾದ ಸಂಗತಿಯೇ..?
ಇಂತಹ ಅಂಕಿ ಅಂಶಗಳ ಮಾಹಿತಿಯೊಂದನ್ನು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ರಾಜ್ಯೋತ್ಸವ ಸಮಾರಂಭದಲ್ಲಿ ಹೊರಹಾಕಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಶೇ. 22ರಷ್ಟು ಜನ ಮಾತ್ರ ಕನ್ನಡ ಭಾಷೆ ಮಾತನಾಡುತ್ತಾರೆ. ಆಡಳಿತದಲ್ಲಿಯೂ ಕನ್ನಡ ಭಾಷೆಗೆ ನ್ಯಾಯ ಸಿಗುತ್ತಿಲ್ಲ. ಅಧಿಕಾರಿಗಳು ತಮಿಳು, ತೆಲಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಂವಹನ ನಡೆಸುತ್ತಿದ್ದು, ಕನ್ನಡಕ್ಕೆ ಅನ್ಯಾಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯ ರಕ್ಷಣೆ ಹೊಣೆ ಹೊತ್ತಿರುವ ಸರಕಾರ ಈವರೆಗೆ 3800 ಸಿಬಿಎಸ್ಸಿ ಶಾಲೆಗಳಿಗೆ ಪರವಾನಗಿ ನೀಡಿದೆ. ಕನ್ನಡ ಶಾಲೆಯಲ್ಲಿ ಪ್ರತಿ 40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರೆಂದು ಸರಕಾರವೇ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 2400 ಕನ್ನಡ ಶಾಲೆಗಳಲ್ಲಿ 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದು, ಶಾಲೆ ಮುಚ್ಚುವ ದುರಂತದ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಕನ್ನಡಪರ ಸಂಘಟನೆಗಳ ಹೋರಾಟದಿಂದಾಗಿ ಕನ್ನಡ ಭಾಷೆ ಉಳಿದುಕೊಂಡಂತಾಗಿದೆ. ಹುಬ್ಬಳ್ಳಿ-ಗದಗ ರಸ್ತೆಗೆ ಹೋದರೆ ಅಲ್ಲಿ ತೆಲಗು ಭಾಷಿಕರೇ ಹೆಚ್ಚು ಸಿಗುತ್ತಾರೆ. ಇನ್ನೂ ಅದೇ ರಸ್ತೆಯಲ್ಲಿ ರೈಲ್ವೆ ಇಲಾಖೆಯ ಪ್ರತಿಯೊಂದು ನಾಮಫಲಕವು ಆಂಗ್ಲಭಾಷೆಯಲ್ಲೇ ಇವೆ. ಈ ಕುರಿತು ಪ್ರಶ್ನಿಸುವರೇ ಇಲ್ಲದಂತಾಗಿದೆ. ಕನ್ನಡ ನಾಡಿನಲ್ಲಿಯೇ ಕನ್ನಡಕ್ಕೆ ಇಂತಹ ದುರ್ಗತಿ ಬಂದರೆ ಮುಂದೇನು? ಎಂದು ಭವಿಷ್ಯತ ಆತಂಕವನ್ನು ಹೊರಟ್ಟಿ ಹೊರಹಾಕಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ