ಮಿತಿ ಮೀರಿದ ಆಸ್ತಿಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಮಿತಿ ಮೀರಿ ಆಸ್ತಿಗಳಿಕೆ ಆರೋಪ ಪ್ರಕರಣ ಸಂಬಂಧ ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕೆ.ಎಸ್.ಈಶ್ವರಪ್ಪ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಿತು.
ಈ ಕುರಿತು ಬಿ.ವಿನೋದ್ ಅವರು ಖಾಸಗಿ ದೂರನ್ನು ದಾಖಲಿಸಿದ್ದರು. ದೂರುದಾರರಿಂದ ಪ್ರಮಾಣೀಕೃತ ಹೇಳಿಕೆ ಪಡೆಯದೆ ಲೋಕಾಯುಕ್ತ ಕೋರ್ಟ್ ಪ್ರಕರಣ ದಾಖಲಿಸಿದೆ. ದೂರುದಾರರ ಹೇಳಿಕೆ ಪಡೆಯದೆ ಪ್ರಕರಣ ದಾಖಲಿಸುವುದು ಕಾನೂನು ಬಾಹಿರ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದುಗೊಳಿಸುವಂತೆ ಈಶ್ವರಪ್ಪ ಪರ ವಕೀಲರು ನ್ಯಾಯಮೂರ್ತಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು.
ಈಶ್ವರಪ್ಪ ಪರ ವಕೀಲರ ಮನವಿಯನ್ನು ಒಪ್ಪದ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ನೇತೃತ್ವದ ಏಕಸದಸ್ಯ ಪೀಠ, ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡು ವಿಚಾರಣೆ ಮುಂದುವರೆಸುವಂತೆ ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.