Select Your Language

Notifications

webdunia
webdunia
webdunia
webdunia

ಘನತ್ಯಾಜ್ಯ ವಿಲೇವಾರಿ ಟೆಂಡರ್‌ನಲ್ಲಿ ಅಕ್ರಮ ಆರೋಪಕ್ಕೆ ಆರ್‌ ಅಶೋಕ್‌ಗೆ ದಾಖಲೆ ಸಮೇತ ಎಂ. ಲಕ್ಷ್ಮಣ್ ಉತ್ತರ

Bangalore Solid Waste Disposal Project
Photo Courtesy X
ಬೆಂಗಳೂರು: ಬೆಂಗಳೂರಿನ ಘನತ್ಯಾಜ್ಯ ವಿಲೇವಾರಿ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮಾಡುತ್ತಿರುವ ₹39,000 ಕೋಟಿ ಅಕ್ರಮ ಹಾಗೂ ಲೂಟಿ ಆರೋಪಗಳು ಸಂಪೂರ್ಣ ಆಧಾರರಹಿತವಾಗಿದ್ದು, ಜನರನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.

ಘನತ್ಯಾಜ್ಯ ವಿಲೇವಾರಿ ಯೋಜನೆಗೆ 30 ವರ್ಷಗಳ ಅವಧಿಯ ಗುತ್ತಿಗೆ ನೀಡಿರುವುದು ಮೂಲಸೌಕರ್ಯ ಅಭಿವೃದ್ಧಿ, ಸಂಸ್ಕರಣಾ ಘಟಕಗಳ ನಿರ್ಮಾಣ ಹಾಗೂ ದೀರ್ಘಾವಧಿಯ ಹೂಡಿಕೆಯನ್ನು ಗಮನದಲ್ಲಿಟ್ಟುಕೊಂಡು. ಕಸ ಸಂಗ್ರಹಣೆ, ಸಾಗಣೆ ಹಾಗೂ ವೈಜ್ಞಾನಿಕ ವಿಲೇವಾರಿಯ ಜವಾಬ್ದಾರಿಯನ್ನು ಗುತ್ತಿಗೆ ಪಡೆಯುವ ಸಂಸ್ಥೆ ನಿರ್ವಹಿಸಲಿದೆ. ಪೌರಕಾರ್ಮಿಕರ ವೇತನವನ್ನು ಬಿಬಿಎಂಪಿಯೇ ಪ್ರತ್ಯೇಕವಾಗಿ ಭರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 6,000 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ವಿದ್ಯುತ್ ಉತ್ಪಾದನೆ ಹಾಗೂ ಸಂಪನ್ಮೂಲ ಮರುಬಳಕೆಯ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರದ ನಿಯಮಾವಳಿಗಳು ಹಾಗೂ ಒಪ್ಪಂದದ ಷರತ್ತುಗಳ ಅನ್ವಯವೇ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಅವರು ತಿಳಿಸಿದರು.

ಯೋಜನೆಯ ವೆಚ್ಚದ ಬಗ್ಗೆ ಮಾತನಾಡಿದ ಅವರು, “ಇದೀಗ ಚಾಲ್ತಿಯಲ್ಲಿರುವ ವ್ಯವಸ್ಥೆಯಲ್ಲಿ ಪ್ರತಿ ಟನ್ ಕಸ ನಿರ್ವಹಣೆಗೆ ಹೆಚ್ಚು ವೆಚ್ಚವಾಗುತ್ತಿದೆ. ಹೊಸ ವ್ಯವಸ್ಥೆಯಲ್ಲಿ ವೆಚ್ಚ ಕಡಿಮೆಯಾಗಲಿದ್ದು, ದೀರ್ಘಾವಧಿಯಲ್ಲಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಲಿದೆ ಇದರಲ್ಲಿ ಯಾವುದೇ ರೀತಿಯ ಲೂಟಿ ನಡೆದಿಲ್ಲ, ಬದಲಿಗೆ ಸಾರ್ವಜನಿಕ ಹಣದ ಉಳಿತಾಯಕ್ಕೆ ಆದ್ಯತೆ ನೀಡಲಾಗಿದೆ” ಎಂದರು.

ಟೆಂಡರ್ ಪ್ರಕ್ರಿಯೆ ಕುರಿತು ವಿವರಿಸಿದ ಅವರು, ಆರಂಭಿಕ ಹಂತಗಳಲ್ಲಿ ಜಾಗತಿಕ ಟೆಂಡರ್‌ಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನಿಯಮಾನುಸಾರ ಪರಿಷ್ಕರಣೆಗಳನ್ನು ಮಾಡಿ ಮರು ಟೆಂಡರ್ ಕರೆಯಲಾಗಿತ್ತು. ಅಂತಿಮವಾಗಿ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಸಂಸ್ಥೆ ಆಯ್ಕೆಯಾಗಿದೆ ಎಂದು ಹೇಳಿದರು.

“ಆಧಾರವಿಲ್ಲದೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿ ನಾಯಕರ ಬಳಿ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ಸಲ್ಲಿಸಲಿ. ಇಡಿ, ಐಟಿ ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಅಕ್ರಮ ನಡೆದಿದ್ದರೆ ತನಿಖೆ ನಡೆಸಿ ಸತ್ಯವನ್ನು ಹೊರತರಲಿ” ಎಂದು ಸವಾಲು ಹಾಕಿದರು.

2022ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ದಂಡ ವಿಧಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಆ ಅವಧಿಯ ಜವಾಬ್ದಾರಿಯ ಕುರಿತು ಉತ್ತರ ನೀಡುವ ಬದಲು ಪ್ರಸ್ತುತ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.

ಬಿಜೆಪಿ ನಾಯಕರು ನೀಟ್ ಪರೀಕ್ಷೆ, ಸಿಬಿಎಸ್‌ಇ ಸಮಸ್ಯೆಗಳು, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಜನಜೀವನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಮೌನ ವಹಿಸಿ, ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದನ್ನೇ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದರು.

“ಜವಾಬ್ದಾರಿಯುತ ವಿರೋಧ ಪಕ್ಷದ ಪಾತ್ರ ನಿರ್ವಹಿಸುವ ಬದಲು ಸುಳ್ಳು ಆರೋಪಗಳ ರಾಜಕಾರಣ ಮಾಡುವುದು ರಾಜ್ಯದ ಹಿತಕ್ಕೆ ವಿರುದ್ಧವಾಗಿದೆ. ಬೆಂಗಳೂರಿನ ಅಭಿವೃದ್ಧಿ ಮತ್ತು ಸ್ವಚ್ಛತಾ ನಿರ್ವಹಣೆಗೆ ಸರ್ಕಾರ ಬದ್ಧವಾಗಿದೆ” ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಬರಿಮಲೆಯಲ್ಲಿ ಎಐ ಆಧಾರಿತ ಜನಸಂದಣಿ ನಿರ್ವಹಣೆಗೆ ಟಿಡಿಬಿ ಯೋಜನೆ