ಸೇವೆ ಖಾಯಮಾತಿಗಾಗಿ ಸರ್ಕಾರವನ್ನು ಒತ್ತಾಯಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಮುಷ್ಕರ ನಿಲ್ಲಿಸಲು ಸರ್ಕಾರ ಕಠಿಣ ಸೂಚನೆ ನೀಡಿದೆ. ನಾಳೆ ಅಂದರೆ ಜ.1 ರಿಂದ ಸೇವೆಗೆ ಹಾಜರಾಗದಿದ್ದಲ್ಲಿ, ವಿದ್ಯಾರ್ಥಿಗಳ ಹಿತಾಸಕ್ತಿ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಆದರೆ ಸರ್ಕಾರಕ್ಕೆ ಸೆಡ್ಡು ಹೊಡಿದಿರುವ ಅತಿಥಿ ಉಪನ್ಯಾಸಕರು ಸೋಮವಾರ ತುಮಕೂರಿನಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.
ಕರ್ನಾಟಕದ 430 ಸರ್ಕಾರಿ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಪತ್ರ ಬರೆದಿರುವ ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ ಜ.1 ರಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದ್ದಾರೆ. ಒಂದು ವೇಳೆ ಹಾಜರಾಗದೇ ಇದ್ದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಎಚ್ಚರಿಕೆ ನೀಡಿದ್ದು, ಉಪನ್ಯಾಸಕರು ಹಾಜರಾಗಿರುವ ಬಗ್ಗೆ ವೆಬ್ ಸೈಟ್ ನ ಗೂಗಲ್ ಫಾರ್ಮ್ ನಲ್ಲಿ ನಮೂದಿಸಬೇಕು ಎಂದು ನಿಬಂಧನೆ ಸಲ್ಲಿಸಿದ್ದಾರೆ.
ಆದರೆ ನಾಳೆ ಸಿದ್ದಗಂಗಾ ಮಠದಿಂದ ಬೃಹತ್ ಪಾದಯಾತ್ರೆ ಆಯೋಜಿಸಿರುವ ಅತಿಥಿ ಉಪನ್ಯಾಸಕರ ಸಂಘ 10 ಸಾವಿರ ಉಪನ್ಯಾಸಕರನ್ನು ಒಗ್ಗೂಡಿಸಲು ಮುಂದಾಗಿದೆ. ಸಿದ್ಧಗಂಗಾ ಮಠಾಧೀಶ ಸಿದ್ದಲಿಂಗ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ