Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಖಾಸಗಿ ಕ್ಷೇತ್ರಕ್ಕೂ ಮೀಸಲು ಘೋಷಣೆ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಖಾಸಗಿ ಕ್ಷೇತ್ರಕ್ಕೂ ಮೀಸಲು ಘೋಷಣೆ
bangalore , ಶುಕ್ರವಾರ, 3 ಜೂನ್ 2022 (20:29 IST)
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ಸಿದ್ದರಾಮಯ್ಯ ಅವರ ಮಾತುಗಳು:
 
ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯದ ಪರವಾದ ಪಕ್ಷ. ಎಐಸಿಸಿ ಈಗಾಗಲೇ ಸ್ಪಷ್ಟಪಡಿಸಿದ್ದು, ಖಾಸಗಿ ಕ್ಷೇತ್ರದಲ್ಲಿ ಕೂಡ ಮೀಸಲಾತಿ ತರಲು ಪಕ್ಷ ಬದ್ಧವಾಗಿದೆ. ಮುಂದೆ ನಾವು ಅಧಿಕಾರಕ್ಕೆ ಬಂದಮೇಲೆ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಜಾತಿಗಳ ಬ್ಯಾಕ್‌ ಲಾಗ್‌ ಹುದ್ದೆಗಳ ಭರ್ತಿ ಹಾಗೂ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೆ ತರುತ್ತೇವೆ. ಔಟ್‌ ಸೋರ್ಸ್‌ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಕೂಡ ಮೀಸಲಾತಿಯನ್ನು ಜಾರಿಗೊಳಿಸಲು ನಾವು ಪ್ರಯತ್ನ ಮಾಡುತ್ತೇವೆ, ಜೊತೆಗೆ ಹೊರಗುತ್ತಿಗೆ ಹುದ್ದೆಗಳ ಭರ್ತಿ ಕಾರ್ಯವನ್ನು ನಾವು ಆರಂಭಿಸುತ್ತೇವೆ. 
 
ಸಾಂಸ್ಕ್ರತಿಕ ದೌರ್ಜನ್ಯಗಳು, ಸಾಂಸ್ಕ್ರತಿಕ ಭಯೋತ್ಪಾದನೆ ವಿರುದ್ಧ ಪಕ್ಷ ಹೋರಾಟ ಮಾಡಲಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವುದನ್ನು ನಾವು ಖಂಡಿಸುತ್ತೇವೆ ಮತ್ತು ಆ ಜನರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಸರ್ವರಿಗೂ ರಕ್ಷಣೆ ಕೊಡುವ ಕೆಲಸವನ್ನು ನಾವು ಮಾಡಲಿದ್ದೇವೆ.
 
ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಅಡುಗೆ ಎಣ್ಣೆ, ಸಿಮೆಂಟ್‌, ಕಬ್ಬಿಣ, ಗೊಬ್ಬರದ ಬೆಲೆ ಮಿತಿಮೀರಿದೆ. ಇದರಿಂದ ಜನಜೀವನ ಹಾಳಾಗಿದೆ. ನಾವು ಅಧಿಕಾರಕ್ಕೆ ಬಂದ ನಂತರ ಬೆಲೆ ನಿಯಂತ್ರಣ ಕೆಲಸವನ್ನು ಮಾಡುತ್ತೇವೆ ಹಾಗೂ ಈಗಿನ ಸರ್ಕಾರದ ಮೇಲೂ ಬೆಲೆ ನಿಯಂತ್ರಿಸುವಂತೆ ಒತ್ತಡ ಹಾಕುತ್ತೇವೆ. ಇದರ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತೇವೆ.
 
ಜಿಎಸ್‌ಟಿ ಪರಿಹಾರ ಜೂನ್‌ 30, 2022 ಕ್ಕೆ ಮುಕ್ತಾಯವಾಗಲಿದೆ. ಇದನ್ನು ಮುಂದಿನ 5 ವರ್ಷಗಳ ವರೆಗೆ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸುತ್ತೇವೆ. ಪ್ರತಿ ವರ್ಷ ಸುಮಾರು 19,000 ಕೋಟಿ ರೂಪಾಯಿ ಜಿಎಸ್‌ಟಿ ಪರಿಹಾರವಾಗಿ ರಾಜ್ಯಕ್ಕೆ ಬರುತ್ತಿತ್ತು. ಆದರೆ ಕೇಂದ್ರ ಸರ್ಕಾರ ಈ ವರ್ಷದ ಬಜೆಟ್‌ ನಲ್ಲಿ ಅಥವಾ ಮೌಖಿಕವಾಗಿ ಕೂಡ ಮುಂದುವರೆಸುವ ಬಗ್ಗೆ ಹೇಳಿಲ್ಲ. ಜಿಎಸ್‌ಟಿ ಬರುವ ಪೂರ್ವದಲ್ಲಿ ನಮ್ಮ ಆದಾಯ ಬೆಳವಣಿಗೆ ದರ 14% ಇತ್ತು, ಜಿಎಸ್‌ಟಿ ಜಾರಿಯಾಗಿ 5 ವರ್ಷದ ನಂತರ ಕೂಡ ನಮ್ಮ ಆದಾಯ ಬೆಳವಣಿಗೆ ದರ 6% ಇದೆ. ಇದರಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ಜಿಎಸ್‌ಟಿ ಕೌನ್ಸಿಲ್‌ ನಲ್ಲಿ ಒತ್ತಡ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ. 
 
ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯ ಹಣ ಅದೆ ಯೋಜನೆಗಳಿಗೆ ಖರ್ಚಾಗಬೇಕು, ಒಂದು ವೇಳೆ ಖರ್ಚಾಗದೆ ಉಳಿದರೆ ಮುಂದಿನ ವರ್ಷ ಅದೇ ಯೋಜನೆಗೆ ಬಳಕೆಯಾಗಬೇಕು ಎಂದು ನಿಯಮವಿದೆ. ಆದರೆ ಕಳೆದೆರಡು ವರ್ಷದಿಂದ ಈ 24.1% ಹಣ ಖರ್ಚಾಗುತ್ತಿಲ್ಲ. ನಿಯಮದ ಪ್ರಕಾರ ಬಜೆಟ್‌ ಗಾತ್ರ 2.02 ಲಕ್ಷ ಕೋಟಿ ಇದ್ದಾಗ ಈ ಯೋಜನೆಗೆ 29,700 ಕೋಟಿ ಅನುದಾನ ನೀಡಿದ್ದೆವು.
ಈಗಿನ ಬಜೆಟ್‌ ಗಾತ್ರ 2.65 ಲಕ್ಷ ಕೋಟಿ ರೂಪಾಯಿ ಆಗಿದೆ. ಆದರೆ ಈ ಯೋಜನೆಗೆ ನೀಡಿರುವ ಅನುದಾನ 28,234 ಕೋಟಿ ರೂಪಾಯಿ. ಇದು 2018 ಕ್ಕಿಂತ ಕಡಿಮೆಯಾಗಿದೆ. ನನ್ನ ಪ್ರಕಾರ ಇದು 42,000 ಕೋಟಿ ಆಗಬೇಕಿತ್ತು. 
ಸೆಕ್ಷನ್‌ 7(ಡಿ) ಅನ್ನು ತೆಗೆದು ಹಾಕಬೇಕು ಎಂದು ದಲಿತ ಸಂಘಟನೆಗಳು ಒತ್ತಾಯ ಮಾಡಿವೆ, ಇದನ್ನು ತೆಗೆಯಬೇಕು ಎಂದು ನಾವು ಸರ್ಕಾರವನ್ನು ಒತ್ತಾಯ ಮಾಡುತ್ತೇವೆ, ಇದು ಆಗದಿದ್ದರೆ ನಾವು ಮುಂದೆ ಅಧಿಕಾರಕ್ಕೆ ಬಂದಾಗ ತೆಗೆದು ಹಾಕುತ್ತೇವೆ. 
 
ಕೃಷ್ಣ, ಕಾವೇರಿ ಹಾಗೂ ಗೋಧಾವರಿ ನದಿ ಸಂಬಂಧಿತ ಯಾವೆಲ್ಲ ಯೋಜನೆಗಳು ನೆನೆಗುದಿಗೆ ಬಿದ್ದಿವೆ, ಇನ್ನೂ ಆರಂಭ ಮಾಡಬೇಕಿವೆ ಅವೆಲ್ಲವನ್ನೂ ಮುಂದಿನ 5 ವರ್ಷಗಳಲ್ಲಿ ಪೂರ್ಣಗೊಳಿಸಲು ವರ್ಷಕ್ಕೆ ರೂ. 40,000 ಕೋಟಿಯಂತೆ 5 ವರ್ಷಗಳಲ್ಲಿ ರೂ. 2 ಲಕ್ಷ ಕೋಟಿ ಖರ್ಚು ಮಾಡುತ್ತೇವೆ. ಕೃಷ್ಣ ಮೇಲ್ದಂಡೆ, ಮಹದಾಯಿ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಮೇಕೆದಾಟು, ಸಾರಂಗಾ ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ರೈತರಿಗೆ ನೆಮ್ಮದಿಯ ಬದುಕು ಕಲ್ಪಿಸಿಕೊಡುತ್ತೇವೆ. ಈ ಬಗ್ಗೆ ಇಂದು ಚರ್ಚೆ ಮಾಡಿದ್ದೇವೆ. 
 
ಉಳಿದ ವಿಚಾರಗಳನ್ನು ನಾವು ಚರ್ಚಿಸಿ, ಅಂತಿಮ ನಿರ್ಣಯ ಕೈಗೊಂಡ ಬಳಿಕ ತಿಳಿಸುತ್ತೇವೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸಿ ಇಂದಿಗೆ 100 ದಿನ