ಮೈಸೂರು: ಹೈಕಮಾಂಡ್ ಮಟ್ಟದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ ಹೇಳಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲವೊಂದಿಷ್ಟು ಗೊಂದಲಗಳು ಇದ್ದವು. ಅವುಗಳನ್ನು ಹೈಕಮಾಂಡ್ ಬಗೆಹರಿಸಿದೆ. ಮುಖ್ಯಮಂತ್ರಿ ಕುರ್ಚಿಯ ವಿಚಾರದಲ್ಲಿ ನಾವು ಮಾಧ್ಯಮದ ಮುಂದೆ ಮಾತನಾಡಬಾರದೆಂದು ಸೂಚನೆ ನೀಡಲಾಗಿದೆ ಎಂದರು.
ಒಂದಿಬ್ಬರು ಶಾಸಕರ ಹೇಳಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಯಾವ ಶಾಸಕರ ಬೆಂಬಲ ಯಾರಿಗೆ ಇದೆ ಎಂಬ ಪ್ರಶ್ನೆ ಈಗೇಕೆ ಬಂದಿತು ಎಂಬುದು ಗೊತ್ತಿಲ್ಲ. ಡಿ.ಕೆ. ಶಿವಕುಮಾರ್– ಸಿದ್ದರಾಮಯ್ಯ ಜೋಡೆತ್ತಿನ ರೀತಿ ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದಿದ್ದಾರೆ. ರಾಜಕಾರಣದಲ್ಲಿ ಎಲ್ಲರಿಗೂ ದೊಡ್ಡ ಹುದ್ದೆಯ ಆಸೆ ಇರುತ್ತದೆ. ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ತಿಳಿಸಿದರು.