ಬೆಂಗಳೂರು: ಹೊಸದಾಗಿ ಮನೆಯ ಸದಸ್ಯರಾಗಿ ಸೇರ್ಪಡೆಯಾದವರನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಲೇಬೇಕಾಗುತ್ತದೆ. ಆದರೆ ಹೊಸ ಹೆಸರು ಸೇರ್ಪಡೆ ಹೇಗೆ ಎಂದು ತಿಳಿದುಕೊಳ್ಳಲು ಇಲ್ಲಿ ನೋಡಿ.
ಮನೆಗೆ ಹೊಸದಾಗಿ ಮದುವೆಯಾಗಿ ಬಂದ ಮಹಿಳೆ ಅಥವಾ ಮಕ್ಕಳ ಹೆಸರು ಸೇರ್ಪಡೆಯಾಗಬೇಕಾದರೆ ಮುಖ್ಯವಾಗಿ ಅವರ ಆಧಾರ್ ಕಾರ್ಡ್ ಬೇಕಾಗುತ್ತದೆ. ಒಂದು ವೇಳೆ ಮದುವೆಯಾಗಿ ಬಂದ ಮಹಿಳೆಯ ಹೆಸರು ಸೇರ್ಪಡೆಯಾಗಬೇಕಾದರೆ ಆಕೆಯ ತವರು ಮನೆಯ ಪಡಿತರ ಚೀಟಿಯಲ್ಲಿರುವ ಹೆಸರು ಅಳಿಸಿ ಮತ್ತೆ ಇಲ್ಲಿ ಹೊಸದಾಗಿ ಸೇರ್ಪಡೆ ಮಾಡಬೇಕಾಗುತ್ತದೆ. ಮಕ್ಕಳ ಹೆಸರು ಸೇರಿಸಬೇಕಾದರೆ ಮಗುವಿನ ಜನನ ಪ್ರಮಾಣ ಪತ್ರದ ಜೊತೆಗೆ ಪೋಷಕರ ಆಧಾರ್ ಕಾರ್ಡ್ ಕೂಡಾ ಬೇಕಾಗುತ್ತದೆ. ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆಗೊಳಿಸುವುದನ್ನು ಆನ್ ಲೈನ್ ಮುಖಾಂತರವೂ ಮಾಡಬಹುದು.
ಇದಕ್ಕಾಗಿ
https://ahara.kar.nic.in/home ಎಂಬ ವೆಬ್ ಸೈಟ್ ಗೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ. ಮೊದಲ ಪುಟದಲ್ಲಿ ಇ ಸೇವೆ ಕ್ಲಿಕ್ ಮಾಡಿ, ಹೊಸ ಪಡಿತರ ಸೇರ್ಪಡೆ ಆಯ್ಕೆಯನ್ನು ಒತ್ತಿ. ಈಗ ಹೊಸ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಿ. ಬಳಿಕ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಿ. ನೀವು ನೀಡಿರುವ ದಾಖಲೆಗಳು ಸರಿಯಾಗಿದ್ದರೆ ನಿಮ್ಮ ಮನೆಗೇ ಪಡಿತರ ಚೀಟಿ ಬರುತ್ತದೆ.
ಒಂದು ವೇಳೆ ನಿಮಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ತಿಳಿಯುತ್ತಿಲ್ಲ ಎಂದಾದರೆ ಹತ್ತಿದ ಬೆಂಗಳೂರು ಒನ್ ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿದರೆ ಅದರ ಸ್ಟೇಟಸ್ ತಿಳಿಯಲೂ ನಿಮಗೆ ಅವಕಾಶವಿದೆ.