Webdunia - Bharat's app for daily news and videos

Install App

ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ನಿವೇಶನ ನೀಡಲು ನಿಯಮವೇ ಬದಲು

Krishnaveni K
ಬುಧವಾರ, 28 ಆಗಸ್ಟ್ 2024 (14:41 IST)
ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆಯವರ ಟ್ರಸ್ಟ್‍ಗೆ ನಿಯಮ ಮೀರಿ ತರಾತುರಿಯಲ್ಲಿ 5 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು. 

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತರಾತುರಿಯಲ್ಲಿ ನೀಡಿರುವುದರ ಹಿಂದಿನ ಉದ್ದೇಶ ಏನು? ಒಂದೇ ದಿನದಲ್ಲಿ ಜಾಗ ಮಂಜೂರು ಮಾಡಿದ್ದಾರೆ. ಮರುದಿನವೇ (6ರಿಂದ) ಮಂಜೂರಾತಿ ಪತ್ರವೂ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಎಂಡ್ ಡಿ) ಕೇಂದ್ರ, ಇನೊವೇಶನ್, ಎಕ್ಸಲೆನ್ಸ್ ಟೆಕ್ನಿಕಲ್ ಇನ್‍ಸ್ಟಿಟ್ಯೂಟ್, ಎಜುಕೇಶನಲ್ ಇನ್‍ಸ್ಟಿಟ್ಯೂಟ್, ಬ್ಯಾಂಕ್ ಮೊದಲಾದವುಗಳಿಗೆ ಸೌಲಭ್ಯ ನೀಡುವ ನಿವೇಶನ ಎಂದು ತಿಳಿಸಿದ್ದಾರೆ. ಇದೇ ಕೆಐಎಡಿಬಿ 14-2-2023ರಂದು ಒಂದು ಅಧಿಕೃತ ಜ್ಞಾಪಕ ಪತ್ರ ಬಿಡುಗಡೆ ಮಾಡಿತ್ತು. ಜನವರಿ 12ರ ಸಭೆಯ ನಿರ್ಧಾರ ಅದಾಗಿತ್ತು. ಕೈಗಾರಿಕಾ ಪ್ರದೇಶದಲ್ಲಿ ಲಭ್ಯ ವಾಣಿಜ್ಯ ಉದ್ದೇಶದ ನಿವೇಶನಗಳನ್ನು 10 ವರ್ಷಗಳ ಲೀಸ್- ಸೇಲ್ ಡೀಡ್ ಮೂಲಕ ಏಲಂನಲ್ಲಿ ನಿಗದಿತ ದರದ ದುಪ್ಪಟ್ಟು ಮೊತ್ತಕ್ಕೆ ನೀಡಲು ನಿರ್ಧರಿಸಿದ್ದರು. ಟ್ರೇಡಿಂಗ್, ಬ್ಯಾಂಕಿಂಗ್, ಹೋಟೆಲ್, ರೆಸ್ಟೋರೆಂಟ್, ಕೆಫೆ, ಥಿಯೇಟರ್ ಮೊದಲಾದವು ವಾಣಿಜ್ಯ ಉದ್ದೇಶದವು ಎಂದು ವಿವರಿಸಿದ್ದಾರೆ. ಆದರೆ, ಕಲಬುರ್ಗಿಯಲ್ಲಿ ವಾಣಿಜ್ಯ ದರದ ಬದಲು ಸಿ.ಎ. ದರ ಮಾಡಿದ್ದಾರೆ ಎಂದು ಟೀಕಿಸಿದರು.
 
ಸಾರ್ವಜನಿಕ ಏಲಂ ಮಾಡದೆ ತರಾತುರಿಯಲ್ಲಿ ಮಂಜೂರು
ಒಂದು ವರ್ಷವಾಗುವ ಮೊದಲೇ ಕಮರ್ಷಿಯಲ್ ಇದ್ದ, ನಿಯಮವನ್ನು ಬದಲಿಸಿದ್ದಾರೆ.  ಕಮರ್ಷಿಯಲ್ ನಿವೇಶನಗಳನ್ನು ಸಾರ್ವಜನಿಕ ಏಲಂ ಮಾಡದೆ ತರಾತುರಿಯಲ್ಲಿ ಮಂಜೂರು ಮಾಡಿದ್ದಾರೆ ಎಂದರು. ಕಮರ್ಷಿಯಲ್ ಉದ್ದೇಶ ಆಗಿದ್ದರೆ ಮೂಲ ದರ ಎಕರೆಗೆ 2.5 ಕೋಟಿ ಇದ್ದರೆ, ದುಪ್ಪಟ್ಟು ದರಕ್ಕೆ ಅಂದರೆ 5 ಕೋಟಿಗೆ ನಿಗದಿ ಮಾಡಿ ಹರಾಜು ಮಾಡಬೇಕಿತ್ತು. ಆಗ ಅದು ಏಲಂನಲ್ಲಿ 10 ಕೋಟಿ ಅಥವಾ 15 ಕೋಟಿಗೆ ಮಾರಾಟ ಆಗುವ ಸಾಧ್ಯತೆ ಇತ್ತು ಎಂದು ವಿವರಿಸಿದರು. ಆದರೆ, ಇಲ್ಲಿ ಸಿಎ ಜಾಗ ಎಂದು ಪರಿಗಣಿಸಿ ಅದೇ ದರಕ್ಕೆ ನೀಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು.
 
ಕೆಐಎಡಿಬಿಯಲ್ಲಿ ಕೆಲವರು ಸಿಎ ಸೈಟ್ ಪಡೆದಿದ್ದು, ಮಾನ್ಯ ಖರ್ಗೆಯವರ ಕುಟುಂಬದ ಒಂದು ಟ್ರಸ್ಟಿಗೆ 5 ಎಕರೆ ಜಮೀನು ಕೊಡಲಾಗಿದೆ ಎಂದು ಗಮನ ಸೆಳೆದರು. ಒಂದು ಟ್ರಸ್ಟಿನಲ್ಲಿ ಪ್ರಭಾವ (ಇನ್‍ಫ್ಲುಯೆನ್ಸ್) ಇರಬಾರದು ಅಥವಾ ಸರಕಾರಿ ಅಧಿಕಾರ ಸ್ಥಾನದಲ್ಲಿ ಇರುವವರು ಇರಬಾರದು ಎಂದಿದೆ. ಆದರೆ, ಪ್ರಿಯಾಂಕ್ ಖರ್ಗೆಯವರು ಕ್ಯಾಬಿನೆಟ್ ಸಚಿವರಾಗಿದ್ದು, ಸರಕಾರದಿಂದ ಈ ಸವಲತ್ತು ಪಡೆದಿದ್ದಾರೆ ಎಂದು ಆಕ್ಷೇಪಿಸಿದರು.

ಹಲವಾರು ನ್ಯೂನತೆಗಳು ಆಗಿವೆ. ಕೆಐಎಡಿಬಿಯಲ್ಲಿ ಸಿಎ ಸೈಟ್ ಗಳನ್ನು ಏಲಂ ಮೂಲಕ ನೀಡುವ ಪದ್ಧತಿ ಮೊದಲಿನಿಂದ ಇದೆ. ಇಲ್ಲಿ ಪಾರ್ಕ್, ವಿದ್ಯಾಸಂಸ್ಥೆ, ಪೆಟ್ರೋಲ್ ಬಂಕ್ ಮೊದಲಾದ ವಿಚಾರಗಳನ್ನು ದಾಖಲಿಸಿಲ್ಲ. ಇದು ಮೊದಲ ತಪ್ಪು. ಉದ್ದೇಶವನ್ನು ಲೆಟರ್ ಹೆಡ್‍ನಲ್ಲಿ ಬರೆದುಕೊಡಿ ಎಂದು ತಿಳಿಸಿ ಪಡೆದು ಅದರ ಪ್ರಕಾರ ಜಾಗ ಕೊಡಲಾಗಿದೆ ಎಂದು ಟೀಕಿಸಿದರು.

5-2-2024ರಂದು ತೀರ್ಮಾನ ಮಾಡಿ ಫೆ. 8ರಿಂದ ವೆಬ್ ಸೈಟಿನಲ್ಲಿ ಅರ್ಜಿ ಲಭಿಸುತ್ತದೆ, ಅದನ್ನು ಡೌನ್‍ಲೋಡ್ ಮಾಡಿ ಫೆ. 23ರೊಳಗೆ ಅರ್ಜಿಗಳನ್ನು ಹಾಕಲು ತಿಳಿಸಿದ್ದರು. ಒಂದು ತಿಂಗಳ ಬದಲಾಗಿ ಕೇವಲ 14 ದಿನಗಳನ್ನು ಕೊಟ್ಟಿದ್ದರು ಎಂದು ದೂರಿದರು. ಇದು ಯಾರಿಗೂ ಗೊತ್ತಾಗಬಾರದೆಂಬ ಉದ್ದೇಶದಿಂದಲೇ ಕೇವಲ 14 ದಿನಗಳನ್ನು ನೀಡಿದ್ದರು ಎಂದು ಆರೋಪಿಸಿದರು.

ಮಾರ್ಚ್ 4ರಂದು ಸಿಂಗಲ್ ವಿಂಡೋ ಏಜೆನ್ಸಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಒಂದೇ ದಿನ ಇಷ್ಟೂ ಅರ್ಜಿಗಳನ್ನು ಪರಿಶೀಲಿಸಿ, ಮರುದಿನವೇ ಸಂಜೆ 5 ಗಂಟೆಗೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಸಭೆ ಸೇರಿ ತೀರ್ಮಾನ ಮಾಡಿದ್ದಾರೆ. 6ರಿಂದ ಮಂಜೂರಾತಿ ಪತ್ರ ನೀಡಲಾಗಿದೆ ಎಂದು ವಿವರಿಸಿದರು.
 
ಅತ್ಯಂತ ದೊಡ್ಡ ಪ್ರಮಾದ

12 ಜಿಲ್ಲೆಗಳಲ್ಲಿ 193 ಸಿ.ಎ. ಸೈಟ್‍ಗಳಿವೆ. ಇವು ಒಟ್ಟು 377.69 ಎಕರೆ ಇದ್ದು, 283 ಅರ್ಜಿಗಳಿದ್ದವು. 30 ದಿನಗಳ ಕಾಲ ನೀಡಿದ್ದರೆ ಇನ್ನಷ್ಟು ಅರ್ಜಿ ಬರುತ್ತಿತ್ತು. ಅಧಿಸೂಚನೆ ಹೊರಡಿಸಿದ್ದೇ ಜನರಿಗೆ ಗೊತ್ತಿಲ್ಲ. 14 ದಿನಗಳಲ್ಲಿ ಅರ್ಜಿ ಸ್ವೀಕರಿಸಿ, 15ನೇ ದಿನ ಪರಿಶೀಲಿಸಿ, 16ನೇ ದಿನವೇ ಮಂಜೂರಾತಿ ಆಗಿದೆ. ಇದು ಕೆಐಎಡಿಬಿ ಚರಿತ್ರೆಯ ಬಹು ದೊಡ್ಡ ಪ್ರಮಾದ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.

ವಿಜಯಪುರದ ಹಲಗನಿಯ ಈಶ್ವರ್ ಸಂಗಪ್ಪ ಬದ್ರಿ ಅವರ 3 ಸ್ಟಾರ್ ಹೋಟೆಲ್‍ಗೆ ಸಿ.ಎ. ಸೈಟ್ ಕೊಡಲಾಗಿದೆ. ಅದು ವಾಣಿಜ್ಯ ಉದ್ದೇಶದ್ದು, ಅದನ್ನು ಏಲಂ ಮಾಡಬೇಕಿತ್ತು. 2.5 ಎಕರೆಗೆ ದುಪ್ಪಟ್ಟು ದರದಲ್ಲಿ ಕಡಿಮೆ ಎಂದರೂ 12.5 ಕೋಟಿ ಸಿಗಬೇಕಿತ್ತು ಎಂದು ಉದಾಹರಣೆ ಕೊಟ್ಟರು.
 
ಬಿಡದಿಯಲ್ಲಿ ಸುನಿತಾ ರಾಜಶೇಖರ್ ಅವರಿಗೆ ಅಪಾರ್ಟ್‍ಮೆಂಟ್ ನಿರ್ಮಿಸಲು ಜಾಗ ಕೊಟ್ಟಿದ್ದು, ಇದು ಸೌಲಭ್ಯದಡಿ ಬರುವುದೇ ಅಥವಾ ವಾಣಿಜ್ಯ ಉದ್ದೇಶದ್ದೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಹಾರೋಹಳ್ಳಿಯಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಸಂಸ್ಥೆಗೆ 2.5 ಎಕರೆ ಕೊಟ್ಟಿದ್ದಾರೆ. ಎಸ್‍ಸಿಗಳಿಗೆ ಕೇವಲ ಕಾಲು ಎಕರೆ ಜಾಗ ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು. 5 ಎಕರೆ, ಆರು ಎಕರೆ ಯಾರಿಗೂ ಕೊಟ್ಟಿಲ್ಲ ಎಂದು ಗಮನ ಸೆಳೆದರು.
 
ಮೂಡದಲ್ಲಿ ನಡೆದ ಮಾದರಿಯ ಲೂಟಿ
ಇದೂ ಒಂದು ಹಗರಣ. ಮೂಡದಲ್ಲಿ ನಡೆದ ಮಾದರಿಯಲ್ಲೇ ಇದೊಂದು ಲೂಟಿ. ಒಂದೇ ತಿಂಗಳಲ್ಲಿ, ಸಂಸತ್ ಚುನಾವಣೆಗೆ ಮೊದಲು ಇದೆಲ್ಲ ನಡೆದಿದೆ. ಇದರ ಉದ್ದೇಶ ಏನು? ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನೆ ಮಾಡಿದರು. ಇಲ್ಲಿ ಒಂದೇ ತಿಂಗಳಲ್ಲಿ ನಿವೇಶನ ನೀಡಿಕೆ ನಡೆದಿದೆ. ಆದರೆ, ನೀವು ಬೇರೆ ಅರ್ಜಿಗಳಿಗೆ ಸೈಟ್ ಕೊಡಲು 2 ವರ್ಷ, 3 ವರ್ಷ ಯಾಕಾಗುತ್ತಿದೆ ಎಂದು ಕೇಳಿದರು.
 
ಖರ್ಗೆ ಕುಟುಂಬದಿಂದ  ದಲಿತರಿಗೆ ಅನ್ಯಾಯ
72 ದಲಿತ ಸಂಘಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ ಕೆಐಎಡಿಬಿ, ಖರ್ಗೆ ಕುಟುಂಬಕ್ಕೆ ಮಾತ್ರ ಭೂಮಿಯನ್ನು ನೀಡುತ್ತಾರೆ ಆದರೆ ಬೇರೆ ಕುಟುಂಬಕ್ಕೆ ನೀಡುವುದಿಲ್ಲ. ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ, ತುರಿತಗತಿಯಲ್ಲಿ ಕೇವಲ 20 ದಿನಗಳಲ್ಲಿ ಖರ್ಗೆ ಕುಟುಂಬಕ್ಕೆ ಭೂಮಿಯನ್ನು ಮಂಜೂರು ಮಾಡುತ್ತಾರೆ.

ಗುಲ್ಬರ್ಗದಲ್ಲಿ ಮಂಜೂರಾಗಿರುವ ಭೂಮಿಯಲ್ಲಿ ಖರ್ಗೆ ಕುಟುಂಬ ಒಬ್ಬರಿಗೂ ಇಲ್ಲಿಯವರೆಗೂ ಕೌಶಲಾಭಿವೃದ್ಧಿ ಮಾಡಿಲ್ಲ. ಆದರೆ, ಬೆಂಗಳೂರಿನಲ್ಲಿ ಮಾತ್ರ ಭೂಮಿ ಪಡೆಯಲು ಯಶಸ್ವಿಯಾಗಿದೆ. ದಲಿತರ ಕೋಟಾದಲ್ಲಿ ಭೂಮಿ ರಾಜಕಾರಣ ಮಾಡಿದ್ದಾರೆ. ಅರ್ಹ ದಲಿತರಿಗೆ ಪಂಗನಾಮ ಹಾಕುವ ಖರ್ಗೆ ಕುಟುಂಬ ಎಂದು ಟೀಕಿಸಿದರು.

ಕೌಶಲ್ಯ ಅಭಿವೃದ್ಧಿ ಕೇಂದ್ರ ಮಾಡಿ ಯುವಕರಿಗೆ ಉದ್ಯೋಗ ನೀಡುವುದು ತಪ್ಪಾ ಎಂದು ಕೇಳಿದ ಪ್ರಿಯಾಂಕ ಖರ್ಗೆಗೆ ಉತ್ತರಿಸಿ, ಅವರದೇ ಟ್ರಸ್ಟ್ ಕಲ್ಬುರ್ಗಿಯಲ್ಲಿ 19 ಎಕರೆ ಜಾಗ ಬಳಸಿಕೊಂಡು ವಿಶ್ವವಿದ್ಯಾನಿಲಯದ ಜಾಗದಲ್ಲಿ ತರಬೇತಿ ಕೇಂದ್ರ  ತೆರೆದಿದೆ. ಒಂದು  ಕಟ್ಟಡವು ನಿರ್ಮಾಣವಾಗಿದೆ ಆದರೆ. ತರಬೇತಿ ಕೇಂದ್ರದ ಉದ್ದೇಶದಿಂದ ಪಡೆದ ಟ್ರಸ್ಟಿನವರು ಎಷ್ಟು ಜನ ಯುವಕರಿಗೆ ತರಬೇತಿ ನೀಡಿದ್ದಾರೆ ಎಂಬುದನ್ನು  ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು. ಒಬ್ಬ ಯುವಕ ಕೂಡ ಅಡ್ಮಿಶನ್ ಆಗಿಲ್ಲ ಅನ್ನೋದು ವಿಶೇಷ ಎಂದರು.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments