ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಬಿದ್ದರೂ ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಂದು ಬೆಳಗ್ಗೆ ಸಂಪಂಗಿರಾಮನಗರದಲ್ಲಿ ನಡೆದಿದೆ. ಸಂಪಂಗಿ ರಾಮನಗರದಲ್ಲಿರುವ ಚಂದ್ರು ಎಂಬುವವರ ಮನೆ ಗೋಡೆ ಕುಸಿದುಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ.
ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆಗೋಡೆ ಸಂಪೂರ್ಣವಾಗಿ ತೇವಗೊಂಡಿದ್ದು, ಇಂದು ಬೆಳಗ್ಗೆ 9.30ಕ್ಕೆ ಏಕಾಏಕಿ ಮನೆಯ ಒಂದು ಗೋಡೆ ಕುಸಿದುಬಿತ್ತು. ಗೋಡೆ ಕುಸಿದು ಬೀಳುವ ಸಂದರ್ಭದಲ್ಲಿ ಕುಟುಂಬಸ್ಥರೆಲ್ಲ ಮನೆಯಲ್ಲೇ ಇದ್ದೆವು. ಕುಸಿತ ಆರಂಭವಾಗುತ್ತಿದ್ದಂತೆ ನಾವೆಲ್ಲ ಎಚ್ಚೆತ್ತುಕೊಂಡು ಹೊರಬಂದ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಚಂದ್ರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಾಜಿ ಕಾಪೆರ್ರೇಟರ್ ಗೋಪಿ ಭೇಟಿ ನೀಡಿ ಪರಿಶೀಲಿಸಿದರು. ಮನೆ ಕಳೆದುಕೊಂಡು ಬೀದಿ ಪಾಲಾಗಿರುವ ಚಂದ್ರು ಕುಟುಂಬಸ್ಥರಿಗೆ ಬಿಬಿಎಂಪಿ ವತಿಯಿಂದಲೇ ಮನೆ ನಿರ್ಮಿಸಿಕೊಡುವಂತೆ ಮುಖ್ಯ ಆಯುಕ್ತರಿಗೆ ಮನವಿ ಮಾಡಿಕೊಳ್ಳು ವುದಾಗಿ ತಿಳಿಸಿದರು.
ರಸ್ತೆ ಗುಂಡಿಗೆ ಬಿದ್ದು ಗಾಯ
ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿದ್ದು ಸರ್ಕಾರಿ ನೌಕರರೊಬ್ಬರು ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ರಸ್ತೆಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ನಡೆದಿದೆ.
ವೆಂಕಟೇಶ್ ಅವರ ಕಾಲಿನ ಇಮ್ಮಡಿ ಒಡೆದು ಹೋಗಿದ್ದು ಸುಮಾರು 22 ಹೊಲಿಗೆಯನ್ನು ಹಾಕಲಾಗಿದೆ. ಪಾಲಿಕೆಯ ನಿರ್ಲಕ್ಷ್ಯದಿಂದ ನಗರದ ರಸ್ತೆಗಳು ಗುಂಡಿಮಯವಾಗಿದ್ದು ಪಾತ್ಹೋಲ್ಗಳಿಗೆ ಇನ್ನೆಷ್ಟು ಬಲಿ ಬೇಕೋ? ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.