Publish Date: Tue, 30 May 2023 (08:02 IST)
Updated Date: Tue, 30 May 2023 (08:38 IST)
ಬೆಳಗಾವಿ : ಆಸ್ತಿ ವಿವಾದ ಹಿನ್ನೆಲೆಯಲ್ಲಿ ಚಿಕ್ಕಪ್ಪನ ಮಗನನ್ನೇ ಹತ್ಯೆಗೈದ ಘಟನೆ ಬೆಳಗಾವಿಯ ಹೊಸೂರು ಬಸವಣ ಗಲ್ಲಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಅಭಿಜಿತ್ ಜಾಧವ್ ಹಾಗೂ ಆತನ ಚಿಕ್ಕಪ್ಪನ ಮಗನ ನಡುವೆ ಜಾಗದ ವಿಚಾರದಲ್ಲಿ ವಿವಾದ ಇತ್ತು. ಇದೇ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಭಾನುವಾರ ಜಗಳ ವಿಕೋಪಕ್ಕೆ ತಿರುಗಿ ಆರೋಪಿ ತನ್ನ ಚಿಕ್ಕಪ್ಪನ ಮಗ ಮಿಲಿಂದ್ ಜಾಧವ್(31) ತೊಡೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಿಲಿಂದ್ ಸಾವನ್ನಪ್ಪಿದ್ದಾನೆ.
ಕುಟುಂಬಕ್ಕೆ ಸೇರಿದ್ದ ಜಾಗದಲ್ಲಿದ್ದ ಮಳಿಗೆಯನ್ನು ಬೇಕರಿ ನಡೆಸಲು ಬಾಡಿಗೆ ನೀಡಲಾಗಿತ್ತು. ಬಾಡಿಗೆ ಪಡೆಯುವ ವಿಚಾರಕ್ಕೆ ಮಿಲಿಂದ್ ಹಾಗೂ ಅಭಿಜಿತ್ ಮಧ್ಯೆ ಆಗಾಗ ಗಲಾಟೆ ಆಗುತ್ತಿತ್ತು. ಈಗ ಮಿಲಿಂದ್ ಹತ್ಯೆಯಲ್ಲಿ ಜಗಳ ಕೊನೆಗೊಂಡಿದೆ.