ನವದೆಹಲಿ: ರಾಮನಗರ ಜಿಲ್ಲೆಗೆ ಈಗ ನಾಮಕರಣ ಮಾಡಿದರೆ ಮತ್ತೇ ನಾನು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಆ ಹೆಸರನ್ನು ಕಿತ್ತೆಸೆಯುತ್ತೇನೆಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಗುಡುಗಿದರು.
ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದರು.
ನವದೆಹಲಿಯಲ್ಲಿ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ಇದನ್ನು ಯಾಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಬೆಂಗಳೂರಿಗೆ ಸೇರ್ಪಡೆಯಾದರೆ ಮೂಟೆಗಟ್ಟಲೇ ಹಣವನ್ನು ತುಂಬಿಸಿಕೊಳ್ಳಬಹುದು ಎಂಬ ಉದ್ದೇಶ ಇರಬಹುದು ಎಂದು ಆಕ್ರೋಶ ಹೊರಹಾಕಿದರು.
ನಾನು ರಾಮನಗರದ ನಾಲ್ಕು ತಾಲ್ಲೂಕುಗಳನ್ನು ಬೆಂಗಳೂರಿಗೆ ಸೇರಿಸುತ್ತೇನೆ. ಭೂಮಿ ಮಾರಾಟ ಮಾಡಬೇಡಿ ಎಂದು ಹೇಳಿದ್ದರು ಎಂದು ಕುಮಾರಸ್ವಾಮಿ ಅವರು ಹೆಸರು ಹೇಳದೆಯೇ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.