Publish Date: Mon, 26 Feb 2024 (20:00 IST)
Updated Date: Mon, 26 Feb 2024 (19:59 IST)
ಕೋಲಾರ :ತಮ್ಮ ಏಕವಚನದಲ್ಲಿ ಡಿ.ಕೆ ಶಿವಕುಮಾರ್ ಹರಿಹಾಯ್ದಿರುವ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, ಡಿಕೆಶಿ ಈಗ ಸಂಪೂರ್ಣವಾಗಿ ತಮ್ಮ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು. ಕುಮಾರಸ್ವಾಮಿ ಸದಾ ಡಬ್ಬದಲ್ಲಿ ರೀಲು ಇದೆ ಎಂದು ಸುಳ್ಳು ಹೇಳುತ್ತಾರೆ. ಆ ರೀಲು ಹೊರಬಿಡುವುದೇ ಇಲ್ಲ ಎಂದು ಡಿಕೆ ಸೋದರರು ಮಾಡಿರುವ ಟೀಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ದೊಡ್ಡಾಲಳ್ಳಿ, ಕೋಡಳ್ಳಿ ಮುಂತಾದೆಡೆ ಡಿ.ಕೆ. ಶಿವಕುಮಾರ್ ಟೆಂಟ್ ಗಳಲ್ಲಿ ತೋರಿಸಿದ ರೀಲನ್ನು ನಾವು ಯಾವತ್ತೂ ತೋರಿಸಿಲ್ಲ ಎಂದು ಪರೋಕ್ಷವಾಗಿ ಬ್ಲೂಫಿಲಂ ದಂಧೆಯ ಆರೋಪವನ್ನು ಕೆದಕಿದ್ದಾರೆ.
ಅವರ ಶಾಸಕರಿಗೆ ಬೆದರಿಕೆ ಹಾಕಲಾಗಿದೆ, ಆಮಿಷ ಒಡ್ಡಲಾಗಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ. ಅವರ ಹಣಬಲ , ತೋಳ್ಬಲ ಮತ್ತು ಅಡ್ಜಸ್ಟ್ ಮೆಂಟ್ ರಾಜಕಾರಣದ ವಿರುದ್ದ ಜೆಡಿಎಸ್ ಎಲ್ಲಾದರೂ ಸೆಣಸಲು ಸಾಧ್ಯವೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಯಾವುದೇ ಶಾಸಕರೂ ಇದುವರೆಗೂ ನನ್ನ ವಿರುದ್ದ ಬೆದರಿಕೆ ಆರೋಪ ಮಾಡಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.