ಹಾಸನ: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಬಯಲಾದಾಗ ಅಣ್ಣ ಎಚ್ ಡಿ ರೇವಣ್ಣರಿಂದ ಎಚ್ ಡಿ ಕುಮಾರಸ್ವಾಮಿ ಅಂತರ ಕಾಯ್ದುಕೊಂಡಿದ್ದರು. ಇದೀಗ ಮೊದಲ ಬಾರಿಗೆ ಅಣ್ತಮ್ಮ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಇಂದು ತಮ್ಮ ತವರು ಜಿಲ್ಲೆ ಹಾಸನದ ಯಲಿಗೂರು ಗ್ರಾಮದಲ್ಲಿರುವ ದೇವೀರಮ್ಮ ದೇವಾಲಯಕ್ಕೆ ಭೇಟಿ ನೀಡಿ ಅಣ್ಣ ರೇವಣ್ಣ ಜೊತೆಗೆ ಕುಮಾರಸ್ವಾಮಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಹೊಳೆನರಸೀಪುರದ ಮಾವಿನಕೆರೆಯ ರಂಗನಾಥ ಸ್ವಾಮೀ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಇಬ್ಬರೂ ನೆಲದ ಮೇಲೆ ಕುಳಿತು ದೇವರ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಪೂಜೆ ವೇಳೆ ಎಚ್ ಡಿ ದೇವೇಗೌಡ, ಪತ್ನಿ ಚನ್ನಮ್ಮ, ಪುತ್ರ, ಸೊಸೆ, ಮೊಮ್ಮಗನ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ರೇವಣ್ಣ ಕೂಡಾ ಪತ್ನಿ ಭವಾನಿ, ಪುತ್ರರಾದ ಪ್ರಜ್ವಲ್, ಸೂರಜ್ ಹೆಸರು ಹೇಳಿ ಅರ್ಚನೆ ಮಾಡಿದ್ದಾರೆ.
ಕುಟುಂಬಕ್ಕೆ ಬಂದಿರುವ ಕಂಟಕಗಳು ನಿವಾರಣೆಯಾಗಿ ನೆಮ್ಮದಿಗಾಗಿ ಅಣ್ಣ-ತಮ್ಮ ಜೋಡಿ ಜೊತೆಯಾಗಿ ಬಂದು ಪೂಜೆ ಸಲ್ಲಿಸಿದ್ದಾರೆ. ಬಹಳ ದಿನಗಳ ನಂತರ ಹೀಗೆ ಅಣ್ಣ-ತಮ್ಮ ಜೊತೆಯಾಗಿ ಕಾಣಿಸಿಕೊಂಡಿದ್ದಲ್ಲದೆ ಪೂಜೆ ಮಾಡಿದ್ದುವಿಶೇಷವಾಗಿತ್ತು. ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದಾಗ ತನ್ನ ಕುಟುಂಬ, ರೇವಣ್ಣ ಕುಟುಂಬ ಬೇರೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡುವ ಮೂಲಕ ಅಂತರ ಕಾಯ್ದುಕೊಂಡಿದ್ದರು.