Publish Date: Sat, 15 Jun 2024 (11:23 IST)
Updated Date: Sat, 15 Jun 2024 (11:25 IST)
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಇಂದು ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಕೇಂದ್ರ ಸಚಿರಾದ ಬಳಿಕ ಎಚ್ ಡಿಕೆ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿದ್ದರು. ನಿನ್ನೆಯಷ್ಟೇ ಅವರು ಬೆಂಗಳೂರಿಗೆ ಬಂದಿದ್ದು, ಅದ್ಧೂರಿ ಸ್ವಾಗತ ಪಡೆದಿದ್ದರು. ಇಂದು ಅವರು ಮಂಡ್ಯದಲ್ಲಿ ತಮ್ಮ ನೂತನ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಜನರಿಂದ ಅಭಿನಂದನೆ ಸ್ವೀಕರಿಸಲಿದ್ದಾರೆ.
ಈ ನಡುವೆ ಅವರು ಸಂಸದರಾಗಿರುವುದರಿಂದ ಈಗಾಗಲೇ ಇರುವ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಅದರಂತೆ ಇಂದು ಅವರು ವಿಧಾನಸೌದಕ್ಕೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದಾದ ಬಳಿಕ ಅವರು ಮಂಡ್ಯಕ್ಕೆ ತೆರಳಲಿದ್ದಾರೆ. ಅದಕ್ಕೆ ಮೊದಲು ಅವರು ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಪತ್ನಿ ಸಮೇತರಾಗಿ ಅವರು ಇಂದು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಅವರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಮಾರಂಭ ನಡೆಯಲಿದೆ. ಸಂಸದರಾಗಿ ಮಾತ್ರವಲ್ಲ, ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾದ ಸಂತಸ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.