Select Your Language

Notifications

webdunia
webdunia
webdunia
webdunia

ಕೆರೆ, ರಾಜಕಾಲುವೆ ನುಂಗಿದವರ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಗುಡುಗು

ಕೆರೆ, ರಾಜಕಾಲುವೆ ನುಂಗಿದವರ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಗುಡುಗು
bangalore , ಸೋಮವಾರ, 27 ಜೂನ್ 2022 (20:42 IST)
ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿ ಜನರ ತೆರಿಗೆ ಹಣ ಲೂಟಿ ಮಾಡಿದವರು, ಕೆರೆ ಮತ್ತು ರಾಜಕಾಲುವೆಗಳನ್ನು ನುಂಗಿದವರು, ಕಾಮಗಾರಿಗಳಲ್ಲಿ ಕಮಿಷನ್ ಹೊಡೆದವರು ಅದೇ ಜನರಿಗೆ ನಾಲ್ಕೈದು ಕೆಜಿ ಅಕ್ಕಿ ನೀಡಿ ಪೋಸು ಕೊಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.
 
ಬೆಂಗಳೂರಿನ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಆರ್. ಟಿ.ನಗರದ ಮೈದಾನದಲ್ಲಿ ಇಂದು ಸಂಜೆ ಜೆಡಿಎಸ್ ಪಕ್ಷದ ವತಿಯಿಂದ ಮೋಯಿದ್ದುನ್ ಅಲ್ತಾಫ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ನಾಡಪ್ರಭುಗಳು ಬಹಳ ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಗರವನ್ನು ಕಟ್ಟಿದ್ದರು. ಕೆರೆಕಟ್ಟೆಗಳು ಕಟ್ಟಿ ಇಡೀ ನಗರವನ್ನು ಜಲ ಶ್ಯಾಮಲಗೊಳಿಸಿದ್ದರು. ಆದರೆ ಇಂದು ಭೂಗಳ್ಳರು ಸಾವಿರಾರು ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೆ. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಮೆರೆಯುತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇವರೆಲ್ಲರನ್ನೂ ಖಾಲಿ ಮಾಡಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಗುಡುಗಿದರು.
 
ಕೆರೆ ಮುಚ್ಚಿ ಭೂ ಕಬಳಿಕೆ ಮಾಡಿ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟಿದ್ದಾರೆ. ರಾಜಕಾಲುವೆಗಳ ಮೇಲೆ ಅರಮನೆಗಳನ್ನು ಮಾಡಿಕೊಂಡಿದ್ದಾರೆ. ಕೆರೆಗಳಿಗೆ ಹರಿದು ಹೋಗಬೇಕಿರುವ ನೀರು ಮನೆಗಳಿಗೆ ಹರಿಯುತ್ತಿದೆ. ಮಳೆ ಬಂದರೆ ತಗ್ಗು ಪ್ರದೇಶಗಳಲ್ಲಿ ವಾಸ ಮಾಡುವ ಜನರು ಜಾಗರಣೆ ಮಾಡಬೇಕಿದೆ. ಇಂಥ ದುಸ್ಥಿತಿ ರಾಜಧಾನಿಯಲ್ಲಿ ನಿರ್ಮಾಣ ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
 
ಮೋದಿ ಸಂಚರಿಸಿದ ರಸ್ತೆ ಕುಸಿತಕ್ಕೆ ಕಿಡಿ:
 
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಚಾರ ಮಾಡಿದ ರಸ್ತೆಗೆ 25 ಕೋಟಿ ರೂಪಾಯಿ ವೆಚ್ಚದಲ್ಲಿ ಡಾಂಬರೀಕರಣ ಮಾಡಿದ್ದಾರೆ. ಅವರು ಬೆಂಗಳೂರಿನಿಂದ ಮೈಸೂರು ಪ್ರವಾಸ ಮುಗಿಸಿ ದೆಹಲಿಗೆ ವಿಮಾನ ಹತ್ತಿದ ಕೂಡಲೇ ಆ ರಸ್ತೆ ಕುಸಿದುಬಿದ್ದಿತ್ತು. ನಾಚಿಕೆಯಾಗಬೇಕು ಇವರಿಗೆ ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
 
ಜನರ ತೆರಿಗೆ ಹಣವನ್ನು ಮನಸೋ ಇಚ್ಚೆ  ವೆಚ್ಚ ಮಾಡಿದ್ದಾರೆ. ಅದಕ್ಕೊಂದು ಉತ್ತರದಾಯಿತ್ವ ಇಲ್ಲ. ಡಾಂಬರ್ ಕಿತ್ತುಹೋಗಿ ಗುಂಡಿ ಕಾಣಿಸಿಕೊಂಡಿದೆ. ಹೀಗೆ ಕೋಟ್ಯಂತರ ರೂಪಾಯಿ ಹಣ ಲೂಟಿ ಹೊಡೆದವರು, ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ರಾಜಕಾಲುವೆಗಳನ್ನು ನುಂಗಿ ನೀರು ಕುಡಿದವರು, ಅದೇ ಲೂಟಿ ಹೊಡೆದ ಹಣದಲ್ಲಿ ಕೋವಿಡ್ ನಲ್ಲಿ ನಾಲ್ಕು ಕೆ.ಜಿ ಅಕ್ಕಿ ನೀಡಿ, ನಾವು ನಿಮ್ಮ ಜತೆ ಇದ್ದೇವೆ ಎಂದು ಪೋಸ್ ಕೊಡ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಟುಕಿದರು.
 
ಬೆಂಗಳೂರು ಸರಿಹೋಗಬೇಕಾದರೆ ಜೆಡಿಎಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತನ್ನಿ. ನಾಡಪ್ರಭು ಕೆಂಪಗೌಡರ ಆಶಯದಂತೆ ಬೆಂಗಳೂರನ್ನು ಅಭಿವೃದ್ಧಿ ಮಾಡುತ್ತೇನೆ. ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ ಜೆಡಿಎಸ್ ಒಂದು ಬಾರಿ ತನ್ನಿ. ಒಂದು ಬಾರಿ ಸ್ವತಂತ್ರ್ಯ ಆಡಳಿತ ನೀಡಿ, 
ಎಲ್ ಕೆಜಿಯಿಂದ 12ನೇ ತರಗತಿವರೆಗೆ ಉತ್ತಮ ಶಿಕ್ಷಣ ನೀಡುವ ಸರ್ಕಾರ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
 
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್, ಹೆಬ್ಬಾಳದ ಅಧ್ಯಕ್ಷ ರುದ್ರಪ್ಪ, ಮೊಯಿದ್ದುನ್ ಅಲ್ತಾಫ್ ಮುಂತಾದವರು ಮಾತನಾಡಿದರು.
 
ಕೆಂಪೇಗೌಡರ ಕುರಿತಾದ ನೃತ್ಯರೂಪಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮೆರಗು ತಂದಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ