Publish Date: Sat, 03 Jan 2026 (09:21 IST)
Updated Date: Sat, 03 Jan 2026 (09:24 IST)
ಬೆಂಗಳೂರು: ಗ್ಯಾರಂಟಿಯಿಂದ ಯಾವುದಕ್ಕೂ ದುಡ್ಡಿಲ್ಲ. ನಾನಿನ್ನೂ ಬದುಕಿದ್ದೀನಿ, ಹೋರಾಟ ಮಾಡ್ತೀನಿ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ದುಡ್ಡು ಸಾಕಾಗ್ತಿಲ್ಲ. ಇದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಈ ದೇವೇಗೌಡ ಇನ್ನೂ ಜೀವಂತವಾಗಿದ್ದೇನೆ. ಸರ್ಕಾರದ ವಿರುದ್ಧ ಹಾಸನದಲ್ಲಿ ಸಮಾವೇಶ ನಡೆಸಿ ಹೋರಾಟ ನಡೆಸುವುದಾಗಿ ದೇವೇಗೌಡರು ಗುಡುಗಿದ್ದಾರೆ.
ಇನ್ನು ಕೋಗಿಲು ಲೇಔಟ್ ನಲ್ಲಿ ಅಕ್ರಮ ಮನೆಗಳ ತೆರವು ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಅನಧಿಕೃತ ಕೊಳಚೆ ಪ್ರದೇಶಗಳ ಸಂಖ್ಯೆ ಹೆಚ್ಚಾಗಿದೆ. ವೀಲ್ ಚೇರ್ ನಲ್ಲಿ ಕೂತಾದರೂ ಸರಿಯೇ ಅಂತಹ ಸ್ಥಳಗಳಿಗೆ ಭೇಟಿ ಕೊಡುತ್ತೇನೆ ಎಂದಿದ್ದಾರೆ.
ಇನ್ನು ನೈಸ್ ಸಂಸ್ಥೆ ಸುಪ್ರೀಂಕೋರ್ಟ್ ನಲ್ಲಿ ರಿಟ್ ಅರ್ಜಿ ಹಾಕಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವ ಅವರು ಈ ವಿಚಾರದಲ್ಲಿ ಡಿಕೆ ಶಿವಕುಮಾರ್ ಕ್ರಮವನ್ನು ಬೆಂಬಲಿಸಿದ್ದಾರೆ. ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಯಾಗಿಸಿ ಅರ್ಜಿ ಹಾಕಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದೆ. ಡಿಕೆ ಶಿವಕುಮಾರ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೋ ನೋಡೋಣ ಎಂದಿದ್ದಾರೆ.