Publish Date: Sat, 13 Apr 2024 (16:48 IST)
Updated Date: Sat, 13 Apr 2024 (16:50 IST)
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಳಿಯ, ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಬಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸಹೋರರ ದೌರ್ಜನ್ಯ ಮಟ್ಟ ಹಾಕಲು ಡಾ ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ದೇವೇಗೌಡರು ಹೇಳಿದ್ದಾರೆ. ಡಿಕೆ ಸಹೋದರರ ಮೇಲೆ ವಾಗ್ದಾಳಿ ನಡೆಸಿದ ದೇವೇಗೌಡರು ಅಳಿಯನ ಪರ ಪ್ರಚಾರ ಮಾಡುವ ಸುಳಿವೂ ನೀಡಿದ್ದಾರೆ.
ನನ್ನ ಅಳಿಯ ಎಂಬ ಕಾರಣಕ್ಕೆ ಮಂಜುನಾಥ್ ಅಲ್ಲಿ ಸ್ಪರ್ಧಿಸುತ್ತಿಲ್ಲ. ಜಯದೇವ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಿದ ಕೀರ್ತಿ ಅವರದ್ದಾಗಿದೆ. ನಮ್ಮ ಪಕ್ಷದಿಂದಲೇ ಸ್ಪರ್ಧಿಸಲಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು. ಅಲ್ಲಿ ಡಿಕೆ ಸಹೋದರರ ದೌರ್ಜನ್ಯ ಕೊನೆಗಾಣಿಸಲು ಮಂಜುನಾಥ್ ರನ್ನು ಕಣಕ್ಕಿಳಿಸಲಾಯಿತು ಎಂದಿದ್ದಾರೆ.
ಕೇವಲ ಹಾಸನ ಮಾತ್ರವಲ್ಲ, ರಾಜ್ಯದ ಹಲವೆಡೆ ಪ್ರಚಾರ ಮಾಡುವುದಾಗಿ ದೇವೇಗೌಡರು ಹೇಳಿದ್ದಾರೆ. ತುಮಕೂರಿನಲ್ಲಿ ಸೋಮಣ್ಣ ಪರ ಪ್ರಚಾರ ಮಾಡುತ್ತೇನೆ, ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲಬೇಕು ಎಂದಿದ್ದಾರೆ. ಆ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.