ರಾಜ್ಯದಲ್ಲಿ ಅಧಿಕಾರಿಗಳ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿದ್ದು, ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಮಹಿಳಾ ಪಿಎಸ್‌ಐ ರೂಪಾ ಅವರು ಆತ್ಮಹತ್ಯೆಗೆ ಯತ್ನಿಸಿದ ಬೆನ್ನಲ್ಲೇ ಹಾಸನ ಉಪ ವಿಭಾಗಾಧಿಕಾರಿ ಇ.ವಿಜಯಾ ಎಂಬ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಹಾಸನ ಉಪ ವಿಭಾಗಾಧಿಕಾರಿಯಾಗಿರುವ ಇ.ವಿಜಯಾ ಅವರು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ತನ್ನ ತಾಯಿಯ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿರುವ ವಿಜಯಾ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲವು ದಿನಗಳ ಹಿಂದ ವರ್ಗಾವಣೆ ಹೊಂದಿದ್ದ ಇ.ವಿಜಯಾ ಅವರು ಕೆಎಟಿ ಮೊರೆ ಹೋಗಿ, ತಡೆಯಾಜ್ಞೆ ಪಡೆದುಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಅಷ್ಟರಲೇ ಅವರ ಸ್ಥಾನಕ್ಕೆ ಸರಕಾರ ಬೇರೆ ಅಧಿಕಾರಿಯನ್ನು ನೇಮಕ ಮಾಡಿದ್ದರಿಂದ ಬಿಕ್ಕಟ್ಟು ಉಂಟಾಗಿತ್ತು. ಈ ಕುರಿತು ಇಂದು ಕಛೇರಿಯ ಎದುರು ಪ್ರತಿಭಟನೆಯೂ ನಡೆದಿತ್ತು. ಈ ಬೆಳವಣಿಗೆಯಿಂದ ಬೇಸತ್ತು ವಿಜಯಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲಸದ ಒತ್ತಡದಿಂದ ಬೇಸತ್ತು ನನ್ನ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವಿಜಯಾ ತಾಯಿ ಆರೋಪಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಎಡಿಷನಲ್ ಎಸ್‌ಪಿ ಶೋಭಾರಾಣಿ ಅವರು ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ