ಬೆಂಗಳೂರು (ಜುಲೈ 03): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಡೀನೋಟಿಫಿಕೇಶನ್ ಭೂತ ಮುತ್ತಿಕೊಂಡಿದೆ. ಬೆಳ್ಳಂದೂರು ಡೀನೋಟಿಫಿಕೇಶನ್ ಪ್ರಕರಣದ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚಿಸಿದೆ. ವಾಸುದೇವ ರೆಡ್ಡಿ ಎಂಬುವರು ಸಲ್ಲಿಸಿದ ದೂರನ್ನು ಪರಿಗಣಿಸಿ ವಿಶೇಷ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ.
ಲೋಕಾಯುಕ್ತ ಪೊಲೀಸರು ಈ ಹಿಂದೆ ಈ ಪ್ರಕರಣದಲ್ಲಿ ಬಿ ರಿಪೋರ್ಟ್ ನೀಡಿದ್ದರು. ಇದರಿಂದ ಯಡಿಯೂರಪ್ಪ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ, ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಪ್ರಕರಣದ ತನಿಖೆಗೆ ಆದೇಶಿಸಿರುವುದು ಸಿಎಂಗೆ ಮತ್ತೆ ಸಂಕಷ್ಟ ಎದುರಾಗುವಂತಾಗಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ತಿರಸ್ಕರಿಸಿದ ನ್ಯಾಯಾಲಯ, ಯಾವುದೇ ವಿಳಂಬ ಇಲ್ಲದೇ ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್ಪಿಗೆ ಸೂಚಿಸಿದೆ. ಏನಿದು ಪ್ರಕರಣ?2000-01ರಲ್ಲಿ ಐಟಿ ಪಾರ್ಕ್ ಗೆಂದು ಕೆಐಎಡಿಬಿ ಬೆಳ್ಳಂದೂರು, ದೇವರ ಬೀಸನಹಳ್ಳಿಯಲ್ಲಿ ಭೂಸ್ವಾಧೀನ ಮಾಡಿತ್ತು. ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಆಗಿದ್ದಾಗ 4.30 ಎಕರೆಯಷ್ಟು ಜಾಗವನ್ನು ಡೀನೋಟಿಫೈ ಮಾಡಿದ್ದರು.