Publish Date: Thu, 31 Oct 2024 (16:54 IST)
Updated Date: Thu, 31 Oct 2024 (16:58 IST)
ಬೆಂಗಳೂರು: ರಾಜ್ಯದಲಿ ಜಾರಿಯಾಗಿರುವ ಶಕ್ತಿ ಯೋಜನೆ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ತಿರುಚಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಶಕ್ತಿ ಯೋಜನೆ ಮರುಪರಿಶೀಲನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಕ್ತಿ ಯೋಜನೆ ಸಂಬಂಧ ನಾನು ಬುಧವಾರ ನೀಡಿದ್ದ ಹೇಳಿಕೆಯನ್ನು ತಿರುಚಲಾಗಿದೆ. ಯೋಜನೆ ನಿಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಜಾರಿಯಲ್ಲಿರುವ ನಮ್ಮ ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದೇ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈ ಯೋಜನೆ ಸೌಲಭ್ಯ ಬೇಡ ಎಂದು ಹೇಳುವವರಿಗೆ ಬಲವಂತ ಮಾಡಲು ಸಾಧ್ಯವೇ? ಅವರ ಸಂಖ್ಯೆ ಶೇಕಡಾ 7ರಿಂದ ಶೇ 8ರಷ್ಟು ಇರಬಹುದು ಎಂದರು.
ಈಗಿನ ಅವಧಿ ಜತೆಗೆ ಮುಂದಿನ ಐದು ವರ್ಷದ ಅವಧಿಯೂ ಸೇರಿ ಒಟ್ಟು ಎಂಟೂವರೆ ವರ್ಷ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿದೆ ಎಂದು ಗೊಂದಲಕ್ಕೆ ತೆರೆ ಎಳೆದರು.