Publish Date: Thu, 30 Apr 2026 (15:20 IST)
Updated Date: Thu, 30 Apr 2026 (15:24 IST)
ಹಾಸನ: ಪ್ರೀವೆಡ್ಡಿಂಗ್ ಶೂಟ್‌ಗೆ ತೆರಳಿದ್ದ ವೇಳೆ ಕೆಲವು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇನ್ನೇನು ಹಸೆಮಣೆ ಏರಬೇಕಿದ್ದ ಯುವಕ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದಲ್ಲಿ ವರದಿಯಾಗಿದೆ.
ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಯುವಕನನ್ನು ಮನು.ಎಲ್.ಎನ್. (29) ಎಂದು ಗುರುತಿಸಲಾಗಿದೆ. ಇವರು ಬೇಲೂರು ತಾಲ್ಲೂಕಿನ, ಲಕ್ಕುಂದ ಗ್ರಾಮದ, ದರ್ಬಾರ್ ಪೇಟೆ ನಿವಾಸಿಯಾಗಿದ್ದಾರೆ.
ಮೇ 10 ರಂದು ಆಲೂರು ತಾಲೂಕು ತೊಗರನಹಳ್ಳಿ ಗ್ರಾಮದ ಕಾಂಚನ ಜೊತೆ ಮನು ಅವರ ಮದುವೆ ನಿಶ್ಚಯವಾಗಿತ್ತು. ಆಲೂರು ಬೈರಾಪುರ ರಸ್ತೆಯಲ್ಲಿರುವ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಯಾಗಿತ್ತು.
ಇನ್ನೂ ಮದುವೆಗೆ 2 ಕುಟುಂಬಗಳಲ್ಲೂ ಭರದಿಂದ ಸಿದ್ಧತೆ ನಡೆಯುತ್ತಿದ್ದು, ಇಂದು ಬೆಳಗ್ಗೆ ಮನು ಅವರು ಪ್ರೀವೆಡ್ಡಿಂಗ್ ಶೂಟಿಂಗ್‌ಗಾಗಿ ವಧುವನ್ನು ಕರೆತರಲು ವಿಟಾರಾ ಬ್ರೆಝಾ ಕಾರಿನಲ್ಲಿ ಒಬ್ಬರೇ ಹೊರಟಿದ್ದಾರೆ.
ಕಾರು ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದ ಬಳಿ ತಲುಪಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮನು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.