ಬೆಂಗಳೂರು: ಐಟಿ ಉದ್ಯೋಗಿಗಳ ಕೆಲಸದ ಅವಧಿಯನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ನೌಕರರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಈಗ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಐಟಿ ಉದ್ಯೋಗಿಗಳ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿತ್ತು. ಈ ಬಗ್ಗೆ ಸರ್ಕಾರ ನಿಯಮ ರೂಪಿಸಲೂ ಮುಂದಾಗಿತ್ತು. ಆದರೆ ಇದರ ಬೆನ್ನಲ್ಲೇ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆಗಳೂ ನಡೆದವು.
ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ ತೀವ್ರ ಪ್ರತಿಭಟನೆ ನಡೆಸಿತ್ತು. ಇದಕ್ಕೆ ಮಣಿದ ಸರ್ಕಾರ ಈಗ 12 ಗಂಟೆ ಕೆಲಸದ ಅವಧಿ ಯೋಜನೆಯನ್ನು ಕೈ ಬಿಡಲು ತೀರ್ಮಾನಿಸಿದೆ. ನೌಕರರ ಬೇಡಿಕೆ ಪರಿಗಣಿಸಿ ಬದಲಾವಣೆ ಕೈ ಬಿಟ್ಟಿರುವುದಾಗಿ ಕಾರ್ಮಿಕ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ 2025 ಭಾಗವಾಗಿರುವ ಪ್ರಸ್ತಾವಿತ ತಿದ್ದುಪಡಿಯಲ್ಲಿ 1961 ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗಳನ್ನು ಪರಿಷ್ಟಕರಿಸಲು ಮುಂದಾಗಿತ್ತು. ಆದರೆ ಈಗ ಆ ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ.