ಅಕ್ಷರ ದಾಸೋಹ ಅಧಿಕಾರಿ ಹಾಗೂ ಶಿಕ್ಷಣ ಸಂಯೋಜಕ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಅಕ್ಷರ ದಾಸೋಹ ಅಧಿಕಾರಿ ಶಿವಕುಮಾರ್ ಹಾಗೂ ಶಿಕ್ಷಣ ಸಂಯೋಜಕ ಗಿರಿಜಾನಂದ ಮುಂಬಳೆ ಬಡಿದಾಡಿಕೊಂಡ ಅಧಿಕಾರಿಗಳಾಗಿದ್ದಾರೆ.
ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಾಗಾರವೊಂದು ಆಯೋಜನೆಯಾಗಿತ್ತು. ಈ ವೇಳೆ, ಗಿರಿಜಾನಂದ ಮುಂಬಳೆ ಅವರು ಒಂದು ಲೆಕ್ಕವನ್ನು ಬಿಡಿಸುವುದನ್ನು ಶಿಕ್ಷಕರಿಗೆ ತಿಳಿಸಿಕೊಟ್ಟರು. ಆದರೆ, ಈ ರೀತಿ ಲೆಕ್ ಬಿಡಿಸುವುದು ತಪ್ಪು ವಿಧಾನ ಎಂದು ಶಿಕುಮಾರ್ ಅವರಿಗೆ ಅನಿಸಿದೆ. ಅವರು ಅದನ್ನು ಅಲ್ಲೇ ಹೇಳಿದರು. ಆ ವಿಚಾರ ಅಲ್ಲಿಗೆ ಮುಕ್ತಾಯಗೊಂಡಿದೆ.
ನಂತರ ಅವರಿಬ್ಬರೂ ಶಿಕ್ಷಣಾಧಿಕಾರಿ ಕಚೇರಿಗೆ ಬಂದಿದ್ದಾರೆ. ಶಿಕ್ಷಣಾಧಿಕಾರಿ ಕೊಠಡಿಯಲ್ಲಿದ್ದ ಶಿವಕುಮಾರ್ ಅವರನ್ನು ಸ್ವಲ್ಪ ಮಾತನಾಡಲಿಕ್ಕಿದೆ ಹೊರಗೆ ಬನ್ನಿ ಎಂದು ಮುಂಬಳೆ ಕರೆದಿದ್ದಾರೆ. ಆದರೆ, ಶಿವಕುಮಾರ್ ತೆರಳುವುದಿಲ್ಲ. ಇದರಿಂದ ಕೋಪಿತರಾದ ಗಿರಿಜಾನಂದ ಮುಂಬಳೆ ಮತ್ತೆ ಬಂದು ಕರೆದಿದ್ದಾರೆ. ಹಾಗೆ ಮೇಲೆ ಹೋದಾಗ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಮುಂಬಳೆ ಅವರು ಶಿವಕುಮಾರ್ ಅವರಲ್ಲಿ ʻʻಎಲ್ಲರ ಎದುರು ಈ ರೀತಿ ಅಪಮಾನ ಮಾಡುವುದು ಸರಿಯೇʼ ಎಂದು ಕೇಳಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆ ಅಂದರೆ ಕೇವಲ ಗುದ್ದಾಡಿಕೊಂಡಿದ್ದಲ್ಲ. ಮೇಜು ಕುರ್ಚಿಗಳ ಮೇಲೆಲ್ಲ ಬೀಳಿಸಿ ಹೊಡೆದುಕೊಂಡಿದ್ದಾರೆ. ಈ ಹಂತದಲ್ಲಿ ಶಿವಕುಮಾರ್ ಅವರ ಕೈಯ ಮೂಳೆಯೂ ಮುರಿದಿದೆ.