Select Your Language

Notifications

webdunia
webdunia
webdunia
webdunia

ಸಿದ್ದು ಸಂಪುಟ ಸಂಪೂರ್ಣ ಬೆತ್ತಲಾಗಿದೆ: ಜಗದೀಶ ಶೆಟ್ಟರ್

ಸಿದ್ದು ಸಂಪುಟ ಸಂಪೂರ್ಣ ಬೆತ್ತಲಾಗಿದೆ: ಜಗದೀಶ ಶೆಟ್ಟರ್
ಹುಬ್ಬಳ್ಳಿ , ಶುಕ್ರವಾರ, 24 ಫೆಬ್ರವರಿ 2017 (16:30 IST)
ಶಾಸಕ ಗೋವಿಂದರಾಜು ಅವರ ಡೈರಿ ಬಹಿರಂಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಸಾರ್ವಜನಿಕವಾಗಿ ಸಂಪೂರ್ಣ ಬೆತ್ತಲಾಗಿದೆ ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಅಭಿಪ್ರಾಯ ಪಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸಂಪುಟದಲ್ಲಿರುವ ಪ್ರಮುಖ ಸಚಿವರೆಲ್ಲ ಭ್ರಷ್ಟರು ಎನ್ನುವ ಮಾಹಿತಿಯನ್ನು ಗೋವಿಂದರಾಜು ಅವರ ಡೈರಿ ಹೊರಹಾಕಿದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟ ಆಡಳಿತ ನಡೆಸುವ ನೈತಿಕತೆ ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರಾದಿಯಾಗಿ ಎಲ್ಲ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
 
ಶಾಸಕ ಗೋವಿಂದರಾಜು ಅವರ ಡೈರಿಯಲ್ಲಿ ಏನೆಲ್ಲ ಸೂಕ್ಷ್ಮ ಮಾಹಿತಿಗಳಿವೆ ಎನ್ನುವುದು ಒಂದೊಂದಾಗಿ ಹೊರ ಬೀಳುತ್ತಿವೆ. ಈ ನಡುವೆ ಅವರ ಹೇಳಿಕೆಗಳು ಸಾಕಷ್ಟು ಸಂಶಯಕ್ಕೆ ಎಡೆ ಮಾಡುಕೊಡುತ್ತಿವೆ. ಹೆಸರು ಹಾಳು ಮಾಡುವ ಉದ್ದೇಶದಿಂದ ಅನಾಮಿಕರು ಡೈರಿಯನ್ನು ನನ್ನ ಮನೆಯಲ್ಲಿ ತಂದಿಟ್ಟು ಹೋಗಿದ್ದಾರೆ. ಡೈರಿಯಲ್ಲಿರುವ ಹಸ್ತಾಕ್ಷರ ನನ್ನದಲ್ಲ ಎನ್ನುವ ಗೋವಿಂದರಾಜು, ಐಟಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಡೈರಿ ವಿಷಯವನ್ನು ಯಾರಿಗಾದರೂ ಹೇಳಿದ್ದೀರಾ? ಎಂದು ಪ್ರಶ್ನಿಸುತ್ತಾರೆ. ಡೈರಿ ಅವರದ್ದಲ್ಲ ಎಂದ ಮೇಲೆ ಐಟಿ ಅಧಿಕಾರಿಗಳಿಗೆ ಕರೆ ಮಾಡುವ ಜರೂರತ್ತು ಏನಿತ್ತು. ಅಲ್ಲದೆ ಇವರ ಮನೆಯಲ್ಲಿಯೇ ಯಾಕೆ ಡೈರಿ ಇಟ್ಟು ಹೋಗಬೇಕು. ಉಳಿದ ನಾಯಕರ ಮನೆಯಲ್ಲಿಯೂ ಇಟ್ಟು ಹೋಗಬಹುದಿತ್ತಲ್ಲ ಎಂದು ಪ್ರಶ್ನಿಸಿದ ಶೆಟ್ಟರ್, ಅದು ಗೋವಿಂದರಾಜು ಅವರದ್ದೇ ಡೈರಿಯಾಗಿದ್ದು, ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
 
ಸಿದ್ದರಾಮಯ್ಯನವರ ಸಂಪುಟದಲ್ಲಿರುವ ಸಚಿವರೆಲ್ಲರೂ ಭ್ರಷ್ಟರಾಗಿದ್ದಾರೆ ಎನ್ನುವುದು ಡೈರಿಯಿಂದ ತಿಳಿದುಬರುವ ಸಾಮಾನ್ಯ ಅಂಶ. ಸಚಿವರಾಗುವ ವೇಳೆ ಯಾರ್ಯಾರಿಗೆ ಎಷ್ಟೆಷ್ಟು ಹಣ ಕೊಡಬೇಕು. ಎಷ್ಟು ಕೊಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಆ ಡೈರಿಯಲ್ಲಿದೆ. ನೀರಾವರಿ, ಲೋಕೋಪಯೋಗಿ, ಇಂಧನ ಹೀಗೆ ಪ್ರಮುಖ ಇಲಾಖೆಯ ಸಚಿವರ ಹಗರಣವೆಲ್ಲ ಬಹಿರಂಗವಾಗುತ್ತಿದೆ. ಕೋಟಿ, ಕೋಟಿ ರು.ಗಳನ್ನು ಕೊಳ್ಳೆ ಹೊಡೆದು, ಜನನಾಯಕರು ಎಂದು ಸೋಗು ಹಾಕಿಕೊಳ್ಳುತ್ತಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಹಾಗೂ ಇನ್ನಿತರ ಕಾಂಗ್ರೆಸ್ ಮುಖಂಡರ ಮನೆಯ ಮೇಲೆ ಐಟಿ ದಾಳಿಯಾದಾಗ ನೂರು, ಇನ್ನೂರು ಕೋಟಿ ರು.ಗಳು ಪತ್ತೆಯಾದವು. ಸಂದರ್ಭದಲ್ಲಿ ಅವರೇ ತಮ್ಮಲ್ಲಿ ಇಷ್ಟು ಪ್ರಮಾಣದ ಹಣವಿದೆ ಎಂದು ಒಪ್ಪಿಕೊಂಡಿದ್ದಾರೆ. ಆ ಹಣವೆಲ್ಲ ಎಲ್ಲಿಂದ ಬಂದಿದ್ದು ಎನ್ನುವುದಕ್ಕೆ ಈಗ ಉತ್ತರ ದೊರೆಯುತ್ತಿದೆ ಎಂದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಸಮಸ್ತ ಆಸ್ತಿಗೆ ನಾವೇ ವಾರಸುದಾರರು: ದೀಪಕ್ ಜಯಕುಮಾರ್