Publish Date: Sat, 14 Mar 2026 (16:19 IST)
Updated Date: Sat, 14 Mar 2026 (16:27 IST)
ಕೊಪ್ಪಳ: ಸಚಿವ ಸ್ಥಾನ ಕೇಳುವ ಅರ್ಹತೆ ಎಲ್ಲ ಶಾಸಕರಿಗೂ ಇದ್ದು, ಅದನ್ನೂ ತಪ್ಪು ಎಂದು ನಾನು ಹೇಳುವುದಿಲ್ಲ. ರೂಟೇಷನ್ ಪ್ರಕಾರ ಮಾಡಿಕೊಟ್ಟಲ್ಲಿ ಎಲ್ಲರಿಗೂ ನ್ಯಾಯ ಸಿಕ್ಕ ಹಾಗೇ ಆಗುತ್ತದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೊಸಬರು ಅವಕಾಶ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ವರಿಷ್ಠರು ಈ ಕುರಿತು ನಿರ್ಧಾರವನ್ನು ಕೈಗೊಳ್ಳುತ್ತಾರೆ. ಶಾಸಕರ ಭೋಜನಕೂಟಕ್ಕೆ ನನಗೂ ಆಹ್ವಾನವಿತ್ತು. ವೈಯಕ್ತಿಕ ಕಾರಣಕ್ಕೆ ಹೋಗಲಿಲ್ಲ. ಹೈಕಮಾಂಡ್ ಸಚಿವ ಸ್ಥಾನದ ಅವಕಾಶ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಅಭಿಪ್ರಾಯ ಹೊರಹಾಕಿದರು.
ಬಜೆಟ್‌ನಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದರೆ ಪೂರಕ ಬಜೆಟ್‌ನಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
ಎಲ್ಲ ಶಾಸಕರಿಗೂ ಸಿ.ಎಂ. ಸ್ಪಂದನೆ ಮಾಡುತ್ತಾರೆ ಎಂದ ಅವರು ನಾನು ಮಂತ್ರಿಯಾಗಲಿ ಎಂದು ನೀವು (ಮಾಧ್ಯಮದವರು) ಹೇಳುವುದೇ ಇಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಹೊರಗಿನ ಜಿಲ್ಲೆಯವರು ಇನ್ನೊಂದು ಜಿಲ್ಲೆಗೆ ಹೋಗಿ ಉಸ್ತುವಾರಿ ಸಚಿವರಾಗುತ್ತಾರೆ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.