ಬೆಂಗಳೂರು: ಧರ್ಮಸ್ಥಳ ಸುತ್ತಮುತ್ತ ಶವ ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈ ಮಧ್ಯೆ ಸಾಕ್ಷಿದಾರನಾಗಿ ಬಂದಿರುವ ದೂರುದಾರ ಗನ್‌ಮ್ಯಾನ್ ಭದ್ರತೆ ಕೇಳಿದ್ದಾರೆ ಎನ್ನಲಾಗಿದೆ.
ಸಾಕ್ಷಿದಾರ ಗುರುತಿಸಿದ 12 ಸ್ಥಳಗಳನ್ನು ಈಗಾಗಲೇ ಅಗೆಯಲಾಗಿದೆ. ಇನ್ನೂ 13ನೇ ಗುರುತು ಮಾತ್ರ ಬಾಕಿ ಉಳಿದಿದೆ. ಗುರುವಾರದ ವಿಚಾರಣೆಯ ಸಂದರ್ಭದಲ್ಲಿ ದೂರುದಾರನ ಪರ ವಕೀಲರು ವಿಶೇಷ ತನಿಖಾ ತಂಡಕ್ಕೆ ಗನ್‌ಮ್ಯಾನ್ ನೀಡಬೇಕೆಂದು ಲಿಖಿತ ಮನವಿ ಮಾಡಿದ್ದಾರೆ.
ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದ ಘರ್ಷಣೆಯ ಬಳಿಕ ದೂರುದಾರನಿಂದ ಈ ವಿಶೇಷ ಮನವಿ ಬಂದಿದೆ. ನನ್ನ ಮೇಲೂ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಗನ್‌ಮ್ಯಾನ್ ನೀಡಬೇಕೆಂದು ಮನವಿ ಮಾಡಿದ್ದಾರೆ.
ಶವಗಳ ಶೋಧ ಮುಕ್ತಾಯದ ನಂತರವೂ ನನಗೆ ಗನ್ ಮ್ಯಾನ್ ಭದ್ರತೆ ನೀಡಬೇಕೆಂದು ಎಸ್‌ಐಟಿ ಎಸ್‌ಪಿ ಜಿತೇಂದ್ರ ದಯಾಮ್ ಮುಂದೆ ಬೇಡಿಕೆ ಇಟ್ಟಿದ್ದಾರೆ.