ಬೆಂಗಳೂರು: ಮಕರ ಸಂಕ್ರಾಂತಿಯ ದಿನದಂದು ಪ್ರತಿವರ್ಷದಂತೆ ಇಂದೂ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದ್ದು ಸಮಯ ಹಾಗೂ ಇತ್ಯಾದಿ ವಿವರ ಇಲ್ಲಿದೆ.
ಮಕರ ಸಂಕ್ರಾಂತಿಯ ದಿನದಿಂದ ಸೂರ್ಯ ತನ್ನ ಪಥ ಬದಲಿಸಿ ಸಂಚಾರ ಆರಂಭಿಸುತ್ತಾನೆ. ಬೆಂಗಳೂರಿನ ಗವಿಪುರಂನಲ್ಲಿರುವ ಪುರಾಣ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಇಂದು ಸೂರ್ಯ ರಶ್ಮಿಯ ವಿಸ್ಮಯ ಸಂಭವಿಸಲಿದೆ.
ಸೂರ್ಯನು ಗುಹೆಯೊಳಗಿರುವ ದೇವಾಲಯದ ಕಿಂಡಿಯ ಮೂಲಕ ಹಾದು ಹೋಗಿ ಗವಿಗಂಗಾಧರನ ಪಾದ ಸ್ಪರ್ಶಿಸುತ್ತದೆ. ಬಳಿಕ ನಂದಿ ವಿಗ್ರಹದ ಮೂಲಕ ಶಿವಲಿಂಗವನ್ನು ಹಾದು ಹೋಗುತ್ತದೆ. ಈ ವಿಸ್ಮಯವನ್ನು ವೀಕ್ಷಿಸಲು ಪ್ರತೀ ವರ್ಷವೂ ಸಾಕಷ್ಟು ಜನ ದೇವಾಲಯಕ್ಕೆ ಬರುತ್ತಾರೆ.
ಇಂದು ಸಂಜೆ 5.14 ರಿಂದ 5.17 ರೊಳಗಾಗಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನದವರೆಗೆ ಮಾತ್ರ ಭಕ್ತರಿಗೆ ದೇವಾಲಯದ ಒಳಗೆ ಪ್ರವೇಶ ಕಲ್ಪಿಸಲಾಗಿದೆ. ಸೂರ್ಯ ವಿಸ್ಮಯವನ್ನು ವೀಕ್ಷಿಸಲು ದೇವಾಲಯದ ಹೊರಗೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ ಸೂರ್ಯ ರಶ್ಮಿ ಸ್ಪರ್ಶ ವೇಳೆ ದೇವರಿಗೆ ವಿಶೇಷ ಪೂಜೆ ನೆರವೇರುತ್ತದೆ. ಸಂಜೆ 6 ರ ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.