ರಸ್ತೆ ಬದಿಯಲ್ಲಿ ಎಲ್ಲೆದರಲ್ಲಿ ಕಸ ತಂದು ಸುರಿದು ಮಾಲಿನ್ಯ ಉಂಟು ಮಾಡುವವರಿಗೆ ಬಿಬಿಎಂಪಿ ಬುದ್ದಿ ಕಲಿಸಲು ಮುಂದಾಗಿದೆ. ಇನ್ಮುಂದೆ ಬೇಕಾಬಿಟ್ಟಿ ಕಸ ಎಸೆಯುವವರನ್ನು ತೋರಿಸಿಕೊಟ್ಟರೆ ಪಾಲಿಕೆಯಿಂದ ಅಪ್ರಿಸಿಯೇಷನ್ ಸರ್ಟಿಫಿಕೇಟ್ ಸಿಗಲಿದೆ. ಕಂಡಕಂಡಲ್ಲಿ ಕಸ, ತ್ಯಾಜ್ಯ ಎಸೆಯುವುದರಿಂದ ನಗರದ ರಸ್ತೆ ತುಂಬಾ ಗಬ್ಬು ನಾರುತ್ತಿದೆ. ಈಗಾಗಲೇ ದಂಡ ಪ್ರಯೋಗ, ಮಾರ್ಷಲ್ ಗಳು ಎಚ್ಚರಿಕೆ ನೀಡಿದರೂ ಸಾರ್ವಜನಿಕರು ಅಸಡ್ಡೆ ತೋರುತ್ತಿದ್ದಾರೆ ಹೀಗಾಗಿ ಹೊಸ ಅಸ್ತ್ರ ಪ್ರಯೋಗ ಮಾಡಲು ಪಾಲಿಕೆ ಹೆಜ್ಜೆ ಇಟ್ಟಿದೆ ಎಂದು ತಿಳಿದು ಬಂದಿದೆ. ಸಿಲಿಕಾನ್ ಸಿಟಿಯಲ್ಲಿ 1500ಕ್ಕೂ ಅಧಿಕ ರಸ್ತೆ ಬದಿಗಳನ್ನು ಗಾರ್ಬೇಜ್ ವಲ್ನರಬಲ್ ಪಾಯಿಂಟ್ಸ್ ಎಂದು ಗುರುತಿಸಲಾಗಿದೆ. ಇದರಲ್ಲಿ 118 ಜಾಗಗಳನ್ನು ಗಾರ್ಬೇಜ್ ಬ್ಲಾಕ್ ಸ್ಪಾಟ್ ಗಳು ಎಂದು ಗುರುತು ಮಾಡಲಾಗಿದೆ. ಇದರಲ್ಲಿ 48 ಜಾಗಗಳು ವಾರಕ್ಕೆ ಎರಡು ಬಾರಿ ಬ್ಲಾಕ್ ಸ್ಪಾಟ್ಗಳಾಗುತ್ತವೆ. 70 ಜಾಗಗಳನ್ನು ತ್ಯಾಜ್ಯದಿಂದ ಗಬ್ಬೆದ್ದು ನಾರುತ್ತಿರುವ ಸ್ಪಾಟ್ಗಳನ್ನು ಗುರುತಿಸಲಾಗಿದೆ 1,400ಕ್ಕೂ ಅಧಿಕ ಜಾಗಗಳಲ್ಲಿ ಮನೆ, ಇತರ ತ್ಯಾಜ್ಯ ತಂದು ಎಸೆದು ಜನರು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಪಾಲಿಕೆ ತಿಳಿಸಿದೆ.