Publish Date: Mon, 20 Feb 2017 (11:20 IST)
Updated Date: Mon, 20 Feb 2017 (11:24 IST)
ನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ ಮೀತಿ ಮೀರಿದೆ. ಪುಲಕೇಶಿ ನಗರ ಠಾಣೆಯ ಪೊಲೀಸ್ ಪೇದೆ ಬಸವರಾಜ್ ಇಪ್ಪರಗಿ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಸುಲಿಗೆ ಮಾಡಿ, ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಬಾಣಸವಾಡಿಯ ಡಾನ್ ಬಾಸ್ಕೋ ಚರ್ಚ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಹೊಯ್ಸಳ ವಾಹನದ ಚಾಲಕರಾಗಿರುವ ಬಸವರಾಜ್ ನಿನ್ನೆ ಮಧ್ಯಾಹ್ನ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಅಡ್ಡಗಟ್ಟಿದ ದುರುಳರು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಬಳಿಕ ಮೊಬೈಲ್‌ನ್ನು ಸಹ
ಕಸಿದುಕೊಳ್ಳಲು ಯತ್ನಿಸಿದ್ದಾರೆ. ಆದರೆ ಬಸವರಾಜ್ ಪ್ರತಿರೋಧ ಒಡ್ಡಿದ್ದು, ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ.ಸ್ಥಳೀಯರು ಬಸವರಾಜ್ ಸಹಾಯಕ್ಕೆ ಬರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಬಸವರಾಜ್ ಮುಖ ಮತ್ತು ದೇಹದ ಮೇಲೆ ಗಾಯಗಳಾಗಿದ್ದು ಅವರನ್ನು ಬೋರಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ.
ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.