ಪ್ರೇರಣಾ ಟ್ರಸ್ಟ್‌ಗೆ ಕಿಕ್ ಬ್ಯಾಕ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೊಳಪಟ್ಟ ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಜಡ್ಡ್ ಮುಂದೆ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಸಿಬಿಐ ನ್ಯಾಯಮೂರ್ತಿ ಅವರು ಕೇಳಿದ ಸುಮಾರು 473 ಪ್ರಶ್ನೆಗಳಲ್ಲಿ ಬಹುತೇಕ ಪ್ರಶ್ನೆಗಳಿಗೆ ಇರಬಹುದು, ಗೊತ್ತಿಲ್ಲ, ಸುಳ್ಳು, ನಿಜ ಎಂದು ಉತ್ತರಿಸಿದ ಅವರು ಕೆಲ ಪ್ರಶ್ನೆಗಳಿಗೆ ವಿವರಣೆಯನ್ನು ಸಹ ನೀಡಿದರು.
ಕೊನೆಯಲ್ಲಿ ನೀವು ಇನ್ನೇನಾದ್ರೂ ಹೇಳುವುದು ಇದೆಯಾ ಎಂದು ಸಿಬಿಐ ನ್ಯಾಯಮೂರ್ತಿ ಕೇಳಿದಾಗ ತಮ್ಮೊಳಗೆ ಅದುಮಿಕೊಂಡಿದ್ದನೋವನ್ನು ತಡೆಯದಾದ ಅವರು ಪ್ರಶ್ನೆಗೆ ಉತ್ತರಿಸುತ್ತ ಗದ್ಗದಿತರಾದರು. ನಾನು ಸಿಎಂ ಆಗಿದ್ದಾಗ ಕಾನೂನು ಬಾಹಿರವಾಗಿ ಯಾರಿಗೂ ಸಹಾಯವನ್ನು ಮಾಡಿಲ್ಲ. ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಕೆಲಸವನ್ನು ಮಾಡಿಲ್ಲ ಎಂದು ತಡವರಿಸುತ್ತ ಉತ್ತರಿಸಿದ ಅವರು ಕರ್ಚಿಫ್‌ನಿಂದ ಕಂಬನಿ ಒರೆಸಿಕೊಂಡರು.
ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಸಂಗ ನಡೆದಿದೆ.