ಬೆಂಗಳೂರು: ವಾಯುಭಾರ ಕುಸಿತದಿಂದ ವಿವಿಧ ಜಿಲ್ಲೆಗಳಲ್ಲಿ ಮುಂಗಾರುಪೂರ್ವ ಮಳೆ ಬಿಟ್ಟೂಬಿಡದೆ ಸುರಿಯುತ್ತಿದ್ದು, ನಾಲ್ಕು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜಧಾನಿಯಲ್ಲಿ ಬುಧವಾರ ಮತ್ತು ಗುರುವಾರ ವ್ಯಾಪಕವಾಗಿ ಮಳೆ ಬೀಳಲಿರುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
20 ಮತ್ತು 21ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದಿದೆ.
ರಾಜಧಾನಿ ತತ್ತರ:
ಮುಂಗಾರು ಪೂರ್ವ ಮಳೆಯ ಆರ್ಭಟಕ್ಕೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ಮಂಗಳವಾರ ಸಂಜೆಯಿಂದ ಬುಧವಾರ ಬೆಳಗಿನ ಜಾವದವರೆಗೆ ಬಿಟ್ಟೂಬಿಡದೆ ಸುರಿದ ಮಳೆಯಿಂದಾಗಿ ವಿವಿಧೆಡೆ ರಸ್ತೆಗಳೆಲ್ಲ ಜಲಾವೃತವಾಗಿದೆ. ತಗ್ಗು ಪ್ರದೇಶಗಳ ನೂರಾರು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ಎಲ್ಲಿ ಅತಿ ಹೆಚ್ಚು ಮಳೆ:
ಹೊರಮಾವಿನಲ್ಲಿ ಅತಿ ಹೆಚ್ಚು 155 ಮಿ.ಮೀ ಮಳೆಯಾದರೆ, ಯಲಹಂಕದಲ್ಲಿ 129 ಮಿ.ಮೀ, ವಿದ್ಯಾಪೀಠದಲ್ಲಿ 127 ಮಿ. ಮೀ ಮಳೆಯಾಗಿದೆ.
ಎಲ್ಲೆಲ್ಲಿ ಮಳೆ:
ಚಾಮರಾಜಪೇಟೆ, ಜಯನಗರ, ಜೆ.ಪಿ.ನಗರ, ಮೈಸೂರು ರಸ್ತೆ, ವಿವಿ ಪುರ, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ವಿಜಯನಗರ, ನಾಗರಭಾವಿ, ಹೆಬ್ಬಾಳ, ಬಸವೇಶ್ವರನಗರ, ವಿದ್ಯಾಪೀಠ, ರಾಜಾಜಿನಗರ, ಕೆಂಗೇರಿ, ನಾಯಂಡಹಳ್ಳಿ, ಕೋರಮಂಗಲ, ಸಂಪಂಗಿರಾಮನಗರ, ಹೆಬ್ಬಾಳ, ಯಶವಂಪುರ, ಜಾಲಹಳ್ಳಿ ಕ್ರಾಸ್, ವೈಟ್‌ಫೀಲ್ಡ್, ಎಚ್ ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್ ಹಾಗೂ ಕಾರ್ಪೊರೇಷನ್‌ನಲ್ಲಿ ಹೆಚ್ಚು ಮಳೆಯಾಗಿದೆ.
ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್:
ನಿನ್ನೆ ತಡ ರಾತ್ರಿಯವರೆಗೆ ಪ್ರಮುಖ ರಸ್ತೆಗಳಲ್ಲೆಲ್ಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಗೆ ಉರುಳಿದ್ದ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸಂಚಾರ ಪೊಲೀಸರು ಹರಸಾಹಸಪಡುತ್ತಿದ್ದಾರೆ. ವಿದ್ಯುತ್ ಪೂರೈಕೆ ವ್ಯತ್ಯಯವಾಗಿದ್ದರಿಂದ ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಿ ನಿವಾಸಿಗಳು ಪರದಾಡುವಂತಾಗಿದೆ.