Select Your Language

Notifications

webdunia
webdunia
webdunia
webdunia

ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ: ಸುರೇಶ್ ಕುಮಾರ್

ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ: ಸುರೇಶ್ ಕುಮಾರ್
bengaluru , ಸೋಮವಾರ, 19 ಜುಲೈ 2021 (20:23 IST)
ಸೋಮವಾರ ಪರೀಕ್ಷೆಯ ನಂತರ ನಗರದ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮೊದಲ ದಿನದ ಪರೀಕ್ಷೆಗೆ ಸಂಬಂಧಿಸಿದ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅವರು, ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಪ್ರಶಾಂತ ವಾತಾವರಣದಲ್ಲಿ ನಡೆದವು. 
 
ಇಂದು ಮೂರು ಕೋರ್ ವಿಷಯಗಳ ಪರೀಕ್ಷೆಗಳು ನಡೆದವು. ಮಕ್ಕಳು ಹೊಸ ಮಾದರಿ ಪರೀಕ್ಷಾ ಪದ್ಧತಿಯನ್ನು ಸುಲಭವಾಗಿ ಅರ್ಥೈಸಿಕೊಂಡು ಒಎಂಆರ್ ಶೀಟ್‍ಗಳಲ್ಲಿ ಗುರುತು ಮಾಡಿದರು. ಕೊಠಡಿ ಮೇಲ್ವಿಚಾಕರ ಮಾ‌ರ್ಗದರ್ಶನದಂತೆ ಒಎಂಆರ್ ಶೀಟ್‍ಗೆ ಮೊದಲು ರಿಜಿಸ್ಟರ್ ನಂಬರ್ ದಾಖಲಿಸಿ ಕೆಳಗಡೆ ಸಹಿ ಮಾಡಿ ನಂತರ ಸರಿಯುತ್ತರಗಳನ್ನು ಗುರುತಿಸಲಾರಂಭಿಸಿದರು.
 
ಇಂದು ಬೆಂಗಳೂರಿನ ರಾಜಾಜಿನಗರದ ಫ್ಲಾರೆನ್ಸ್, ಕಡಾಂಬಿ, ಜಯನಗರದ ವಿಜಯಾ ಪ್ರೌಢಶಾಲೆ, ಬಿಇಎಸ್ ಪ್ರೌಢಶಾಲೆ, ಕಾರ್ಮಂಟ್ ಕಾನ್ವೆಂಟ್ ಶಾಲೆ, ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ, ಸಾರಕ್ಕಿ ಪಬ್ಲಿಕ್ ಶಾಲೆ ಕೋಟೆ ಪ್ರದೇಶದ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಎಲ್ಲ ಕಡೆಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳು ಅತ್ಯಂತ ಶಿಸ್ತಿನಿಂದ ಪರೀಕ್ಷೆಗೆ ಹಾಜರಾಗಿದ್ದರು ಎಂದು ಅವರು ತಿಳಿಸಿದರು. 
 
ಕೆಲವೆಡೆ ಶಾಸಕರು ಮತ್ತು ಸಚಿವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಖುದ್ದಾಗಿ ಭೇಟಿ ನೀಡಿದ್ದಾರೆ ಮಕ್ಕಳನ್ನು ಹುರಿದುಂಬಿಸಿದ್ದಾರೆ. ಹಲವಾರು ಕಡೆಗಳಲ್ಲಿ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ ಸಚಿವರು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 
 
ಮಕ್ಕಳು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದರು. ನೇರವಾಗಿ ಪರೀಕ್ಷಾ ಕೇಂದ್ರದ ಆರೋಗ್ಯ ತಪಾಸಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ಜ್ವರ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಮುಂದೆ ಹಾಕಲಾಗಿದ್ದ ಫಲಕದಲ್ಲಿ ತಮ್ಮ ಕೊಠಡಿ ಸಂಖ್ಯೆಯನ್ನು ನೋಡಿಕೊಂಡು ಪರೀಕ್ಷಾ ಕೊಠಡಿಗಳಿಗೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದಿಂದ ಹೋಗುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ ಎಂದು ಸಚಿವರು ಹೇಳಿದರು.
 
ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳ ಶೇ. ಹಾಜರಾತಿಯೂ ಸಹ ಈ ಬಾರಿ ಹೆಚ್ಚಾಗಿದೆ ಎಂದು ಅವರು ಹೇಳಿದರು. 
 
ಗಣಿತ ವಿಷಯಕ್ಕೆ 8,52,191 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,49,199 ಅಭ್ಯರ್ಥಿಗಳು ಹಾಜರಾಗಿ 2992 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.64 ಹಾಜರಾತಿ ಇದೆ. ಕಳೆದ ವರ್ಷ ಇದು 98.30 ಇತ್ತು. 
 
ವಿಜ್ಞಾನ ವಿಷಯಕ್ಕೆ 8,43,976 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,40,841 ಅಭ್ಯಥಿ೵ಗಳು ಹಾಜರಾಗಿ 3127 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.62 ಹಾಜರಾತಿ ಇದೆ. ಕಳೆದ ವರ್ಷ ಇದು 98.36 ಇತ್ತು. 
 
ಸಮಾಜ ವಿಜ್ಞಾನ ವಿಷಯಕ್ಕೆ 8,24,689 ಅಭ್ಯರ್ಥಿಗಳು ನೊಂದಾಯಿಸಿದ್ದರೆ, 8,21,823 ಅಭ್ಯಥಿ೵ಗಳು ಹಾಜರಾಗಿ 2867 ಮಕ್ಕಳು ಗೈರು ಹಾಜರಾಗಿಯಾಗಿದ್ದಾರೆ. ಶೇ. 99.65 ಹಾಜರಾತಿ ಇದೆ. ಕಳೆದ ವರ್ಷ ಇದು 98.43 ಇತ್ತು. 
 
ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಆರೋಗ್ಯ ಇಲಾಖಾ ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಎಲ್ಲ ಅಭ್ಯರ್ಥಿಗಳು ಮಾಸ್ಕ್‍ಗಳನ್ನು ಧರಿಸಿದ್ದರು. ಮಾಸ್ಕ್ ಧರಿಸದೇ ಬಂದ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ನೀಡಲಾಯಿತು ಎಂದು ಅವರು ವಿವರಿಸಿದರು. 
 
ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸುರೇಶ್ ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಳೀನ್ ಕುಮಾರ್ ನಕಲಿ ಆಡಿಯೋ: ಬಿಜೆಪಿ ಶಾಸಕರಿಂದ ದೂರು