ಬೆಂಗಳೂರು: ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು, ಆಗ ದೇಶ ನೆಮ್ಮದಿಯಾಗಿ ಇರುತ್ತದೆ ಎಂದು ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಸ್ವಾಮೀಜಿ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದಲ್ಲಿ ಕೇಸ್ ದಾಖಲಾಗಿದೆ. ಇತ್ತೀಚೆಗೆ ವಕ್ಫ್ ವಿರುದ್ಧ ಫ್ರೀಡಂ ಪಾರ್ಕ್ ನಲ್ಲಿ ನಡೆದಿದ್ದ ಹೋರಾಟದಲ್ಲಿ ಭಾಗಿಯಾಗಿದ್ದ ಸ್ವಾಮೀಜಿ ಮುಸ್ಲಿಮರಿಗೆ ಮತದಾನದ ಹಕ್ಕು ನೀಡಬಾರದು. ಆಗ ದೇಶ ನೆಮ್ಮದಿಯಾಗಿ ಇರುತ್ತದೆ. ವಕ್ಫ್ ಕೂಡಾ ನಿರ್ನಾಮವಾಗಬೇಕು ಎಂದಿದ್ದರು.
ಅವರ ಹೇಳಿಕೆ ರಾಜ್ಯ ಸರ್ಕಾರದ ಸಚಿವರುಗಳಾದ ಜಿ ಪರಮೇಶ್ವರ್, ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಈಗ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ.
ಸ್ವಾಮೀಜಿ ಹೇಳಿಕೆ ಪ್ರಚೋದನಕಾರಿಯಾಗಿದ್ದು ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆ ಬರಬಹುದು ಎಂದು ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಇನ್ನು, ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೇ ಸ್ಪಷ್ಟನೆ ನೀಡಿದ್ದ ಸ್ವಾಮೀಜಿ, ಬಾಯ್ತಪ್ಪಿ ಅಂತಹ ಹೇಳಿಕೆ ನೀಡಿದೆ. ಮುಸ್ಲಿಮರೂ ಭಾರತೀಯರೇ. ರೈತರಿಗೆ ಒಳ್ಳೆಯದಾಗಬೇಕು ಅಷ್ಟೇ ಎಂದಿದ್ದರು.