Publish Date: Mon, 16 Mar 2026 (17:41 IST)
Updated Date: Mon, 16 Mar 2026 (17:43 IST)
ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ಇದೀಗ ನೀರಿನ ಮಟ್ಟ 110.44 ಅಡಿಗೆ ಕುಸಿದಿದೆ ಎಂದು ತಿಳಿದಿದೆ. ಇದರಿಂದ ಜೂನ್, ಜುಲೈನಲ್ಲಿ ನೀರಿನ ಅಭಾವ ಎದುರಾಗುತ್ತಾ ಎಂಬ ಭಯ ಶುರುವಾಗಿದೆ. ಆದರೆ ಅಧಿಕಾರಿಗಳ ಪ್ರಕಾರ ನೀರಿಗೆ ಯಾವುದೇ ಅಭಾವ ಎದುರಾಗುವುದಿಲ್ಲ ಎನ್ನಲಾಗಿದೆ.
124.80 ಗರಿಷ್ಠ ಅಡಿ ಮಟ್ಟದ ಕೆಆರ್‌ಎಸ್ ಡ್ಯಾಂನಲ್ಲಿ 110.44 ಅಡಿಯಷ್ಟು ನೀರಿದೆ.
32.167 ಟಿಎಂಸಿಯಷ್ಟು ಸದ್ಯ ನೀರಿದ್ದು, ಇದು ಜೂನ್, ಜುಲೈ ತಿಂಗಳಿನವರೆಗೆ ಬರುತ್ತದೆ, ಆದ್ದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನಲಾಗಿದೆ.
ಈ ವರ್ಷ ಕಳೆದ ವರ್ಷ ಉತ್ತಮ ಮಳೆ ಬಿದ್ದ ಪರಿಣಾಮ, ಕೆಆರ್‌ಎಸ್ ವರ್ಷದಲ್ಲಿ ಎರಡು ಬಾರಿ ಭರ್ತಿಯಾಗಿತ್ತು. ಜೊತೆಗೆ ಹಲವು ತಿಂಗಳು ಗರಿಷ್ಠ ಮಟ್ಟವನ್ನೇ ಕಾಯ್ದುಕೊಂಡಿತ್ತು.
ಕುಡಿಯುವ ನೀರಿನ ಜೊತೆಗೆ ಮಂಡ್ಯ ಜಿಲ್ಲೆಯ ರೈತರ ಬೇಸಿಗೆ ಬೆಳೆಗಳಿಗೂ ಸಹ ನೀರನ್ನು ಕಟ್ಟು ಪದ್ಧತಿಯಲ್ಲಿ ಪೂರೈಸಲಾಗುತ್ತಿದೆ. ಸದ್ಯ ಈ ವರ್ಷ ಮೈಸೂರು, ಮಂಡ್ಯ, ಬೆಂಗಳೂರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.