ಹೈದರಾಬಾದ್ : ಕಿರುತೆರೆ ನಿರೂಪಕ ಪ್ರಣವ್ ಸಿಸ್ಟ್ಲ ಹೆಸರಿನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ವ್ಯಕ್ತಿಯೊಬ್ಬ ಭೋಗಿರೆಡ್ಡಿ ತ್ರಿಶಾ ಎಂಬ ಯುವತಿಯೊಂದಿಗೆ ಚಾಟ್ ನಡೆಸುತ್ತಿದ್ದ. ಇದು ತಿಳಿದ ನಂತರ ತ್ರಿಶಾ ನಿರೂಪಕನನ್ನೇ ಅಪಹರಿಸಿ ಬಳಿಕ ಪೊಲೀಸರ ಅತಿಥಿಯಾಗಿದ್ದಾಳೆ.ಬಂಧಿತ ಯುವತಿ ಖ್ಯಾತ ಉದ್ಯಮಿಯಾಗಿದ್ದು ಐದು ಸ್ಟಾರ್ಟ್ ಅಪ್ ಕಂಪನಿಗಳ ಒಡತಿಯಾಗಿದ್ದಳು ಎಂದು ತಿಳಿದುಬಂದಿದೆ. ಕಿರುತೆರೆ ಆಂಕರ್ ಒಬ್ಬರನ್ನು ಹಿಂಬಾಲಿಸಿ ಅಪಹರಿಸಿದ ಆರೋಪದ ಮೇಲೆ ಮಹಿಳಾ ಉದ್ಯಮಿಯೊಬ್ಬಳನ್ನು ಬಂಧಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಕಿರುತೆರೆ ನಿರೂಪಕ ಪ್ರಣವ್ ಹೆಸರಿನ ಪ್ರೊಫೈಲ್ ಒಂದರ ಜೊತೆ ಭೋಗಿರೆಡ್ಡಿ ತ್ರಿಶಾ ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಚಾಟ್ ನಡೆಸುತ್ತಿದ್ದಳು. ಬಳಿಕ ಆತ ಪ್ರಣವ್ ಫೋಟೋ ಬಳಸಿ ಈಕೆಯನ್ನು ವಂಚಿಸಲು ಯತ್ನಿಸುತ್ತಿರುವುದು ತಿಳಿದು ಬಂದಿತ್ತು. ನಂತರ ತ್ರಿಶಾ ಪ್ರಣವ್ ರನ್ನು ನೇರವಾಗಿ ಸಂಪರ್ಕಿಸಿ ಈ ಬಗ್ಗೆ ಹೇಳಿಕೊಂಡು ಪ್ರೇಮಯಾಚನೆ ಮಾಡಿದ್ದಳು. ಆದರೆ ಪ್ರಣವ್ ಈಕೆಯನ್ನು ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ಕುಪಿತಗೊಂಡ ತ್ರಿಶಾ ಆತನನ್ನು ಹಿಂಬಾಲಿಸಲು ಶುರುಮಾಡಿದ್ದಳು. ಆತನ ಕಾರ್ ಗೆ ಜಿಪಿಎಸ್ ಸಾಧನ ಅಳವಡಿಸಿ ಹಿಂಬಾಲಿಸಿ ಆತನನ್ನು ಅಪಹರಿಸಿದ್ದಳು. ಆದರೆ ಹೇಗೋ ತಪ್ಪಿಸಿಕೊಂಡ ಪ್ರಣವ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಧಾವಿಸಿ ಪ್ರಣವ್ ನನ್ನು ರಕ್ಷಿಸಿ ತ್ರಿಶಾಳನ್ನು ಬಂಧಿಸಿದ್ದಾರೆ.